ಬಿಜೆಪಿಯ ಭ್ರಷ್ಟಾಚಾರವೇ ನಮ್ಮ ಪ್ರಚಾರದ ಅಜೆಂಡಾ: ರಾಮಲಿಂಗಾರೆಡ್ಡಿ

ಸೋಮವಾರ, 3 ಆಗಸ್ಟ್ 2015 (15:50 IST)
ಬಿಬಿಎಂಪಿ ಚುನಾವಣಾ ದಿನಾಂಕ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯಿಸಿದ್ದು, ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಬಿಜೆಪಿ ನಡೆಸಿರುವ ಭ್ರಷ್ಟಾಚಾರವೇ ನಮ್ಮ ಪಕ್ಷದ ಅಜೆಂಡಾ ಎಂದಿದ್ದಾರೆ. 
 
ಇಂದು ಬಿಬಿಎಂಪಿ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಪ್ರಚಾರ ಸಿದ್ಧತೆಗಳು ಹೇಗೆ ನಡೆಯುತ್ತಿವೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಬಿಬಿಎಂಪಿಯನ್ನು ಆಳಿದೆ. ಆದರೆ ಬಿಜೆಪಿ ಪ್ರತಿನಿಧಿಗಳು ಉತ್ತಮ ಆಡಳಿತ ನಡೆಸದೆ ಕೇವಲ ಭ್ರಷ್ಟಾಚಾರ ನಡೆಸಿದ್ದಾರೆ. ಆದ್ದರಿಂದ ಅವರು ಮಾಡಿರುವ ಭ್ರಷ್ಟಾಚಾರವೇ ನಮ್ಮ ಪಕ್ಷದ ಅಜೆಂಡಾ ಆಗಿದೆ ಎಂದರು. 
 
ಇದೇ ವೇಳೆ ಬಿಜೆಪಿ, ಕಸ ವಿಲೇವಾರಿ ವಿಷಯದಲ್ಲಿಯೂ ಕೂಡ ಭ್ರಷ್ಟಾಚಾರ ನಡೆಸಿದ್ದು, ಬಿಬಿಎಂಪಿ ಹಾಗೂ ಬೆಂಗಳೂರಿನ ಮಾನ ಹರಾಜು ಹಾಕಿದೆ ಎಂದ ಅವರು, ಬಿಜೆಪಿ ಜನಪ್ರತಿನಿಧಿಗಳು ಬಿಬಿಎಂಪಿಗೆ 9 ಸಾವಿರ ಕೋಟಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿದರು. 
 
ಬಳಿಕ, ಅವರ ಐದು ವರ್ಷಗಳ ಆಡಳಿತಾವಧಿಯಲ್ಲಿ ಒಟ್ಟು 39 ಹಗರಣಗಳು ನಡೆದಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ಕೂಡ ನಮ್ಮ ಬಳಿ ಇವೆ. ಅಲ್ಲದೆ ಆ ಎಲ್ಲಾ ದಾಖಲೆಗಳನ್ನು ಜನತೆಯ ಮುಂದೆ ಬಿಡುಗಡೆಗೊಳಿಸಲಿದ್ದು, ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. 

ಇನ್ನು ರಾಲಿಂಗಾರೆಡ್ಡಿ ಅವರ ಹೇಳಿಕೆಗೆ ಪ್ರತಿಯಾಗಿ ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ರಾಜ್ಯಾಡಳಿತ ಹಾಗೂ 30 ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದೆ. ಬಿಬಿಎಂಪಿ ಆಡಳಿತದ ಅವಧಿಯಲ್ಲಿ ಅವರು ಮಾಡಿದ ಭ್ರಷ್ಟಾಚಾರಗಳೂ 300ಕ್ಕೂ ಅಧಿಕ. ಆ ಬಗ್ಗೆ ಎಲ್ಲಾ ದಾಖಲೆಗಲೂ ಕೂಡ ನಮ್ಮ ಬಳಿ ಇವೆ. ಅವುಗಳನ್ನು ಬಹಿರಂಗಗೊಳಿಸಲು ನಾನೂ ಸಿದ್ಧನಿದ್ದೇನೆ ಎಂದು ಆಕ್ರೋಶ ಭರಿತರಾಗಿ ನುಡಿದರು.  
 
ಇದೇ ವೇಳೆ, ಬಿಬಿಎಂಪಿ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ನಗರದಲ್ಲಿದ್ದ ಸಾಕಷ್ಟು ಸಾರ್ವಜನಿಕ ಆಸ್ತಿಯನ್ನು ಹಂತ-ಹಂತವಾಗಿ ಖಾಸಗಿಯವರಿಗೆ ಮಾರಿದ್ದಾರೆ. ಅಂತಹ ದುರಾಡಳಿತ ನೋಡಿದ ಜನರು, ಬಿಜೆಪಿಯನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದರು. ಆದ್ದರಿಂದ ಹಿಂದೆಯೂ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಮುಂದೆಯೂ ಶ್ರಮಿಸಲಿದ್ದೇವೆ ಎಂದರು. 

ವೆಬ್ದುನಿಯಾವನ್ನು ಓದಿ