ಪಾಕ್ ಬೋಟ್ ಸ್ಫೋಟ ಪ್ರಕರಣ, ಡಿಐಜಿ ಹೇಳಿಕೆ ಬಗ್ಗೆ ತನಿಖೆ: ಪರಿಕ್ಕರ್

ಬುಧವಾರ, 18 ಫೆಬ್ರವರಿ 2015 (15:49 IST)
ಪಾಕಿಸ್ತಾನ ಮೂಲದ ಬೋಟ್ ಸ್ಫೋಟ ಪ್ರಕಱಮಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪ್ರತಿಕ್ರಿಯಿಸಿದ್ದು, ಇಲಾಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದು ಅವನ್ನು ಅಗತ್ಯ ಬಂದಾಗ ಬಿಡುಗಡೆಗೊಳಿಸಲಾಗುವುದು. ಆದರೆ ಬೋಟನ್ನು ಸ್ಫೋಟಿಸಿರುವುದು ರಕ್ಷಣಾ ಸಿಬ್ಬಂದಿಗಳಲ್ಲ. ಲೊಶಾಲಿ ಅವರ ಹೇಳಿಕೆ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.  
 
ಈ ಹಿಂದೆ ಕರಾವಳಿ ರಕ್ಷಣಾ ಪಡೆಯ ಡಿಐಜಿ ಲೊಶಾಲಿ ಅವರು ನೀಡಿದ್ದ ಹೇಳಿಕೆಯನ್ನು ಮತ್ತೆ ಅವರೇ ತಿರುಚುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯು ಈಗಾಗಲೇ ಲಿಖಿತ ಹೇಳಿಕೆಗಳನ್ನು ಬಿಡುಗಡೆ ಮಾಡಿತ್ತು. ಅದಕ್ಕೆ ಸರ್ಕಾರ ಈಗಲೂ ಬದ್ಧವಾಗಿದೆ. ಅಲ್ಲದೆ ಬೋಟನ್ನು ಸ್ಫೋಟಿಸಿರುವ ಬಗ್ಗೆ ನನಗೆ ಎಲ್ಲಿಯೂ ತಿಳಿದು ಬಂದಿಲ್ಲ. ಪ್ರಕರಣ ಸಂಬಂಧ ಕರಾವಳಿ ತೀರದ ಕಾವಲು ಪಡೆಯ ಡಿಐಜಿ ಲೋಶಾಲ ಸೇರಿದಂತೆ ಅಂದು ಅಲ್ಲಿ ನಿಯೋಜಿಸಲಾಗಿದ್ದ ಸಿಬ್ಬಂದಿಯೂ ಕೂಡ ಸ್ಫೋಟಿಸಿದ್ದೆವು ಎಂಬ ವಿಚಾರವನ್ನು ಖುದ್ದು ತಿರಸ್ಕರಿಸಿದ್ದಾರೆ. ಆದರೆ ಡಿಐಜಿ ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಮಾಧ್ಯಮಗಳಿಂದ ಕಲೆಹಾಕಿ ಆ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಆ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. 
 
ಡಿ.31ರಂದು ಪಾಕಿಸ್ತಾನದ ದೋಣಿಯೊಂದು ಗುಜರಾತ್ ರಾಜ್ಯದತ್ತ ಸಾಗಿತ್ತು. ಈ ವೇಳೆ ಭಾರತೀಯ ಕರಾವಳಿ ರಕ್ಷಣಾ ಪಡೆ ಗಸ್ತು ತಿರುಗುತ್ತಿದ್ದಾಗ ಆ ದೋಣಿ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು. ಈ ವೇಳೆ ಕಾರ್ಯಚರಣೆಯ ನೇತೃತ್ವವನ್ನು ಕರಾವಳಿ ರಕ್ಷಣಾ ಪಡೆಯ ಡಿಐಜಿ ಬಿ.ಕೆ.ಲೋಷಾಲಿ ಅವರು ವಹಿಸಿದ್ದರು ಎನ್ನಲಾಗಿದ್ದು, ಪಾಕಿಗಳನ್ನು ಬಂಧಿಸಿದರೆ ಬಿರಿಯಾನಿ ಕೊಡಬೇಕಾಗುತ್ತದೆ. ಆದ್ದರಿಂದ ಅವರನ್ನು ಸ್ಫೋಟಿಸಿ ಎಂದು ನಮ್ಮ ಸಿಬ್ಬಂದಿಗೆ ಸೂಚಿಸಿದ್ದೆ ಎಂಬುದಾಗಿ ಖುದ್ದು ಅವರೇ ಹೇಳಿಕೆ ನೀಡಿದ್ದರು. ಆದರೆ ಪ್ರಸ್ತುತ ಪ್ರತಿಕ್ರಿಯಿಸುತ್ತಿರುವ  ಅವರು, ನಾನು ಹಾಗೆ ಹೇಳಿಯೇ ಇಲ್ಲ. ಅಲ್ಲದೆ ಅಂದಿನ ಕಾರ್ಯಚರಣೆಯ ನೇತೃತ್ವ ವಹಿಸಿರಲಿಲ್ಲ ಎಂದಿದ್ದಾರೆ. ಇವರ ಈ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. 

ವೆಬ್ದುನಿಯಾವನ್ನು ಓದಿ