ಮೆಹದಿ ಪೋಷಕರು ಇಂದು ಆತನನ್ನು ಭೇಟಿ ಮಾಡಲಿದ್ದಾರೆ: ರೆಡ್ಡಿ

ಬುಧವಾರ, 17 ಡಿಸೆಂಬರ್ 2014 (14:20 IST)
ಟ್ವಿಟ್ಟರ್ ಅಕೌಂಟ್‌ಗಳ ಮೂಲಕ ಐಎಸ್ಐಎಸ್ ಸಂಘಟನೆ ಸೇರುವಂತೆ ಯುವಕರನ್ನು ಪ್ರೋತ್ಯಾಹಿಸುತ್ತಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದ ಮೆಹದಿಯ ಪೋಷಕರು ಇಂದು ನಗರಕ್ಕೆ ಆಗಮಿಸುತ್ತಿದ್ದು, ಆರೋಪಿಯನ್ನು ಭೇಟಿಯಾಗಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಆರೋಪಿಯನ್ನು ಬಂಧಿಸಿದ ಕೂಡಲೇ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದೆವು. ಆಗ ಕೋರ್ಟ್ ಆರೋಪಿಯನ್ನು ಪೊಲೀಸ್ ಕಸ್ಟಡಿಗೇ ನೀಡಿ ಇನ್ನಷ್ಟು ವಿಚಾರಣೆಗೊಳಪಡಿಸುವಂತೆ ಇಲಾಖೆಗೆ ಸೂಚಿಸಿತ್ತು. ಆದರೆ ನ್ಯಾಯಾಲಯ ನೀಡಿದ್ದ 5 ದಿನಗಳ ಕಸ್ಟಡಿ ಅವಧಿ ಮುಗಿದ್ದು, ಹೆಚ್ಚಿನ ಅವಧಿಯನ್ನು ನ್ಯಾಯಲಯ ನೀಡಬೇಕೆಂದು ಇಂದು ನ್ಯಾಯಾಧೀಶರಿಂದ ಅನುಮತಿ ಪಡೆಯಲಿದ್ದೇವೆ. ಈ ಹಿನ್ನೆಲೆಯಲ್ಲಿಯೇ ಇಂದು ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದೇವೆ ಎಂದು ತಿಳಿಸಿದರು.  
 
ಇದೇ ವೇಳೆ ಮಾತನಾಡಿದ ಅವರು, ಕಸ್ಟಡಿಯಲ್ಲಿರುವ ಆರೋಪಿ ಮೆಹದಿಯನ್ನು ಭೇಟಿ ಮಾಡಲು ಆತನ ಪೋಷಕರು ಕೋಲ್ಕತ್ತಾದಿಂದ ಇಂದು ನಗರಕ್ಕೆ ಆಗಮಿಸಿದ್ದು, ಇಂದೇ ಭೇಟಿ ಮಾಡಲಿದ್ದಾರೆ ಎಂದರು. ಆದರೆ ಪೊಲೀಸ್ ಇಲಾಖೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ನಾವು ನಮ್ಮ ಮಗನನ್ನು ಸಂಪರ್ಕಿಸಲು ಹೋಗುವುದಿಲ್ಲ. ಆದರೆ ಅವರು ನಮ್ಮ ಮಗನೊಂದಿಗೆ ವಿಚಾರಣೆ ನಡೆಸಬಹುದು ಎಂದು ಆರೋಪಿ ಮೆಹದಿ ಪೋಷಕರು ಪ್ರತಿಕ್ರಿಯಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. 
 
ಶಮ್ಮಿ ವಿನ್ಸೆಂಟ್ ಎಂಬ ನಕಲಿ ಟ್ವಿಟ್ಟರ್ ಅಕೌಂಟ್ ಮೂಲಕ ದೇಶಿ ಯುವಕರನ್ನು ಐಎಸ್ಐಎಸ್ ಭಯೋತ್ಪಾದನಾ ಸಂಘಟನೆಗೆ ಸೇರುವಂತೆ ಪ್ರಚೋದಿಸುತ್ತಿದ್ದ. ಅಲ್ಲದೆ ನಾನು ತಲೆ ಕತ್ತರಿಸುವುದನ್ನು ನಂಬುತ್ತೇನೆ ಎಂದು ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಪ್ರಚೋದನೆ ಹಾಗೂ ಯುದ್ಧಕ್ಕೆ ಕುಮ್ಮಕ್ಕು ನೀಡಿದ್ದ ಎಂಬ ಆರೋಪದ ಮೇರೆಗೆ ಡಿ.13ರಂದು ಪೊಲೀಸರು ಆರೋಪಿ ಮೆಹದಿಯನ್ನು ಬಂಧಿಸಿದ್ದರು. 

ವೆಬ್ದುನಿಯಾವನ್ನು ಓದಿ