ಯದುವೀರ್‌ಗೆ ಪಟ್ಟಾಭಿಷೇಕ: ಗದ್ಗದಿತರಾದ ಪ್ರಮೋದಾದೇವಿ

ಸೋಮವಾರ, 25 ಮೇ 2015 (16:23 IST)
ಮೈಸೂರು ರಾಜ ಸಂಸ್ಥಾನದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಒಡೆಯರ್ ಅವರ ಪಟ್ಟಾಭಿಷೇಕ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ಕರೆದಿದ್ದ ರಾಣಿ ಪ್ರಮೋದಾದೇವಿ ಅವರು ಒಡೆಯರ್‌ ತಮ್ಮ ಪತಿ ಶ್ರೀಕಂಠ ದತ್ತ ಒಡೆಯರ್ ಅವರನ್ನು ನೆನೆದು ಗದ್ಗದಿತರಾದರು.
 
ಹೌದು, ಅರಮನೆ ಆವರಣದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಈ ಸನ್ನಿವೇಶ ಕಂಡು ಬಂದಿದ್ದು, ತಮ್ಮ ಪತಿ ಶ್ರೀಕಂಠದತ್ತ ಒಡೆಯರ್ ಅವರನ್ನು ನೆನೆದು ರಾಣಿ ಪ್ರಮೋದಾದೇವಿ ಗದ್ಗದಿತರಾದರು. ಓಡೆಯರ್ ಡಿ.10 2013ರಲ್ಲಿ ದೈವಾದೀನರಾಗಿದ್ದಾರೆ.   
 
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದಾದೇವಿ, ರಾಜವಂಶದ ನೂತನ ಉತ್ತರಾಧಿಕಾರಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮವು ಮೇ 27 ಮತ್ತು 28ರಂದು ನಡೆಯುತ್ತಿದೆ. ಮೊದಲ ದಿನವಾದ ಮೇ 27ರಂದು ಹಲವು ದೇವತಾ ಕಾರ್ಯಗಳಿದ್ದು, ಆ ಬಳಿಕ ಸಂಸ್ಥಾನದ ರಾಜಗುರುಗಳಿಗೆ ಪೂಜೆ ಸಲ್ಲಿಸಿ ಅನುಮತಿ ಪಡೆದು ಮುಂದಿನ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದರು. 
 
ಇದೇ ವೇಳೆ, ಎರಡನೇ ದಿನವಾದ ಮೇ 28ರಂದು ಬೆಳಗ್ಗೆ ಮೊದಲ ಹಂತವಾಗಿ ಗಣಪತಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಹೋಮ-ಹವನಗಳು ನಡೆಯಲಿದ್ದು, ಬೆಳಗ್ಗೆ 930ರಿಂದ 10.38ರ ಶುಭ ಮುಹೂರ್ತದಲ್ಲಿ ಪಟ್ಟಾಭಿಷೇಕ ಕಾರ್ಯ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅರಮನೆ ಆವರಣದಲ್ಲಿನ 16 ದೇವತೆಗಳಿಗೆ ಯದುವೀರರಿಂದಲೇ ಪೂಜೆ ನಡೆಯಲಿದ್ದು, ಅದೇ ದಿನ ಸಂಜೆ 7ಗಂಟೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. 
 
ಬಳಿಕ, ಸ್ಥಳಾವಕಾಶದ ಕೊರತೆ ಇರುವುದರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಕೇವಲ ಸಂಬಂಧಿಕರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. 
 
ಈ ಹಿಂದೆ ಪ್ರಮೋದಾದೇವಿ ಅವರ ಪತಿ, ಕೊನೆಯ ಅರಸ ಶ್ರೀಕಂಠದತ್ತ ಒಡೆಯರ್ ಅವರ ಪಟ್ಟಾಭಿಷೇಕವು 1972ರಲ್ಲಿ ನಡೆದಿತ್ತು. ಅದಾದ 40 ವರ್ಷಗಳ ಬಳಿಕ ಅರಮನೆಯಲ್ಲಿ ಮತ್ತೆ ಪಟ್ಟಾಭಿಷೇಕ ನಡೆಯುತ್ತಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

ವೆಬ್ದುನಿಯಾವನ್ನು ಓದಿ