ಸ್ವಯಂ ನಿವೃತ್ತಿ ಪಡೆದ ಸೈನಿಕರಿಗೂ ಪೆನ್ಷನ್: ನಿವೃತ್ತ ಸೈನಿಕರ ಧರಣಿ ಅಂತ್ಯ

ಭಾನುವಾರ, 6 ಸೆಪ್ಟಂಬರ್ 2015 (16:24 IST)
ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆ ಅಡಿಯಲ್ಲಿ ನಿವೃತ್ತಿಗೂ ಮುನ್ನವೇ ಸ್ವಯಂ ನಿವೃತ್ತಿ ಪಡೆದ ಸೈನಿಕರನ್ನೂ ಕೂಡ ಪರಿಗಣಿಸಲಾಗುವುದು ಎಂದು ಪ್ರದಾನಿ ನರೇಂದ್ರ ಮೋದಿ ಅವರು ಇಂದು ತಿಳಿಸಿರುವ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕರು ನಡೆಸುತ್ತಿದ್ದ ಅಮರಣಾಂತ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.  
 
ಈ ಸಂಬಂಧ ಮಾತನಾಡಿದ ನಿವೃತ್ತ ಕಮಾಂಡರ್ ಸತ್ಬೀರ್ ಸಿಂಗ್, ನಿವೃತ್ತ ಸೈನಿಕರನ್ನೂ ಕೂಡ ಯೋಜನೆಯಲ್ಲಿ ಪರಿಗಣಿಸುತ್ತೇವೆ ಎಂದು ಪ್ರಧಾನಿ ಮೋದಿ ಘೋಷಿಸಿರುವುದಕ್ಕೆ ಅಭಿನಂದನೆ ಎಂದ ಅವರು, ಕೇಂದ್ರ ಸರ್ಕಾರವು ಸಮಾನ ಪಿಂಚಿಣಿ ವ್ಯವಸ್ಥೆ ಸೇರಿದಂತೆ ಇತರೆ ಮೂರು ವಿಷಯಗಳ ಈಡೇರಿಕೆಗೆ ಒಪ್ಪಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಆ ಅಂಶಗಳ ಬೇಡಿಕೆಗಳನ್ನು ಕೇಂದ್ರ ಈಡೇರಿಸುವವರೆಗೆ ಧರಣಿ ಮುಂದುವರಿಸುವುದಾಗಿ ತಿಳಿಸಿದರು.  
 
ಇಂದು ಬೆಳಗ್ಗೆ ಹರಿಯಾಣದ ಫರಿದಾಬಾದ್‌ನಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ್ದ ಪ್ರಧಾನಿ ಮೋದಿ, ನಿವೃತ್ತಿಗೂ ಮುನ್ನವೇ ಸ್ವಯಂ ನಿವೃತ್ತಿ ಪಡೆದವರಿಗೂ ಕೂಡ ನಿವೃತ್ತ ಸೈನಿಕರಿಗೆ ನೀಡುವಂತೆಯೇ ಪಿಂಚಿಣಿ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕರು ತಾವು ಹಮ್ಮಿಕೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸತ್ಬೀರ್ ಸಿಂಗ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 
 
ಇನ್ನು ಕಳೆದ 40 ವರ್ಷಗಳಿಂದ ಬೇಡಿಕೆಯಲ್ಲಿದ್ದ ಈ ಯೋಜನೆಯನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರವು ನಿನ್ನೆ ಘೋಷಿಸಿತ್ತು.  

ವೆಬ್ದುನಿಯಾವನ್ನು ಓದಿ