ಭ್ರಷ್ಟರು, ಜನವಿರೋಧಿಗಳಿಗೆ ಮತದಾರರು ಮಣೆಹಾಕಿದ್ದಾರೆ: ಎಚ್‌ಡಿಕೆ ಬೇಸರ

ಮಂಗಳವಾರ, 25 ಆಗಸ್ಟ್ 2015 (16:50 IST)
ಬಿಬಿಎಂಪಿ ಚುನಾವಣೆಯಲ್ಲಿ ಯಾರಿಗೆ ಸೋಲು ಯಾರಿಗೆ ಗೆಲುವು ಮುಖ್ಯವಲ್ಲ. ಆದರೆ ಬೆಂಗಳೂರಿಗೆ ಮಾತ್ರ ಅಪಾಯ ಕಾದಿದೆ ಎಂದು ಜೆಡಿಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 
 
ಬಿಜೆಪಿ ಪಕ್ಷ ಅಭಿವೃದ್ಧಿ ಹೆಸರಲ್ಲಿ ನಡೆಸುವ ಲೂಟಿ ಬಗ್ಗೆ ಬಾಯಿ ಬಿಚ್ಚಬಾರದು ಬಿಬಿಎಂಪಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದರೂ ಮೌನವಾಗಿರಬೇಕು ಎಂದು ಜನತೆ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ ಎಂದು ಲೇವಡಿ ಮಾಡಿದರು. 
 
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಭಾರಿ ಭ್ರಷ್ಟಾಚಾರದಲ್ಲಿ ಮುಳುಗಿವೆ. ಆದಾಗ್ಯೂ ಮತದಾರರು ಜೆಡಿಎಸ್‌ಗೆ ಮತ ಹಾಕಿಲ್ಲ. ಬೆಂಗಳೂರಿನ ಜನತೆ ಸಕಾರಾತ್ಮಕ ಫಲಿತಾಂಶ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಭ್ರಷ್ಟಾಚಾರದ ಬಗ್ಗೆ ಬಾಯಿಬಿಡಬಾರದು ಮೌನವಾಗಿರಿ. ಸಾಧ್ಯವಾದರೆ ಅವರೊಂದಿಗೆ ಅಡ್ಜೆಸ್ಟ್ ಆಗಿ ಎಂದು ಜನತೆ ಸ್ಪಷ್ಟ ಸಂದೇಶ ನೀಡಿರುವುದಾಗಿ ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದಿದ್ದಾರೆ.
 
ಭ್ರಷ್ಟರು, ಭೂಗಳ್ಳರ ಬಗ್ಗೆ ಧ್ವನಿ ಎತ್ತುವುದೇ ತಪ್ಪು ಆದ್ದರಿಂದಲೇ ನಮ್ಮ ಪಕ್ಷಕ್ಕೆ ಕೇವನಲ 14 ಸ್ಥಾನಗಳಲ್ಲಿ ಗೆಲುವು ನೀಡಿದ್ದಾರೆ.
 
ಜೆಡಿಎಸ್ ಪಕ್ಷದ 14 ಸದಸ್ಯರ ಗೆಲುವಿಗೆ ಹಗಲಿರಳು ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ