ಹೆಚ್1ಎನ್1ಗೆ ವ್ಯಕ್ತಿ ಬಲಿ: ಖಾದರ್, ಪಾಟೀಲ್ ಭೇಟಿ

ಸೋಮವಾರ, 2 ಮಾರ್ಚ್ 2015 (13:38 IST)
ನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೆಚ್1ಎನ್1 ಸೋಂಕಿತ ರೋಗಿಯೋರ್ವರು ವೆಂಟಿಲೇಟರ್‌ಗೆ ವಿದ್ಯುತ್ ಸಂಪರ್ಕವಿಲ್ಲದೆ ಸಾವನ್ನಪ್ಪಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್ ಹಾಗೂ ವೈದ್ಯಕೀಯ ಉನ್ನತ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು.
 
ಹೆಚ್1ಎನ್1 ಸೋಂಕಿತ ರೋಗಿ, ಕಸ್ತಾರಬಾ ನಗರದ ನಿವಾಸಿ ಗಣೇಶ್ ಎಂಬುವವರು ಕಳೆದ 9 ದಿನಗಳ ಹಿಂದೆ ಈ ಆಸ್ಪತ್ರೆಗೆ  ದಾಖಲಾಗಿದ್ದರು. ಎಂದಿನಂತೆ ನಿನ್ನೆ ಮಧ್ಯಾಹ್ನವೂ ಕೂಡ ಚೆನ್ನಾಗಿದ್ದರು. ಆದರೆ ರಾತ್ರಿ ವೇಳೆಗೆ ಅತಿ ಹೆಚ್ಚು ಜ್ವರದ ಲಕ್ಷಣ ಕಾಣಿಸಿಕೊಂಡ ಕಾರಣ ಅವರನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ನೀಡಲು ಮುಂದಾದರು. ಆದರೆ ವೆಂಟಿಲೇಟರ್‌ಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಗಣೇಶ್ ಸಾವನ್ನಪ್ಪಿದ್ದರು. 
 
ಈ ಹಿನ್ನೆಲೆಯಲ್ಲಿ ಅವರ ಪತ್ನಿ ಉಮಾ ಅವರು ವೈದ್ಯರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಸರ್ಕಾರ ಹಾಗೂ ವಾದ್ಯರನ್ನು ದೂರಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದ ಉಭಯ ಸಚಿವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ಸಲ್ಲಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. 
 
ಇನ್ನು ಪ್ರಕರಣ ಸಂಬಂದ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯರು, ರೋಗಿ ಗಣೇಶ್ ಜ್ವರ ಅತಿಯಾದ ಹಿನ್ನೆಲೆಯಲ್ಲಿ ತುಂಬಾ ಅಸ್ವಸ್ಥಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಸುನೀಗಿದ್ದಾರೆ. ನಾವು ಸಂಪೂರ್ಣವಾಗಿ ಚಿಕಿತ್ಸೆಯನ್ನು ನೀಡಿದ್ದೇವೆ. ಅದರಲ್ಲಿ ನಮ್ಮ ತಪ್ಪಿಲ್ಲ ಎಂದಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 46 ಮಂದಿ ಹೆಚ್1ಎನ್1 ರೋಗದ ಸೋಂಕಿಗೆ ಬಲಿಯಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ