ಕೋಳಿ ಕಳ್ಳಿಯರ ಕೈಗೆ ಕೋಳ !

ಬುಧವಾರ, 17 ಡಿಸೆಂಬರ್ 2014 (11:48 IST)
ಕೋಳಿಗಳ ಕಳ್ಳತನವನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದ ಆಂಧ್ರ ಪ್ರದೇಶ ಮೂಲದ ಮೂವರು ಮಹಿಳೆಯರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನ ಸೋಮೋಶ್ವರ ಗ್ರಾಮದ ಜನ ಇತ್ತೀಚಿಗೆ ಒಂದು ಸಮಸ್ಯೆಯನ್ನು ಎದುರಿಸುತ್ತಿದ್ದರು. ಬಡ ಗ್ರಾಮವಾಸಿಗಳು ಸಾಕಿದ್ದ ಕೋಳಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿರುವುದು ವಿಚಿತ್ರ ಮತ್ತು ಆತಂಕಕ್ಕೆ ಕಾರಣವಾಗಿತ್ತು. ಕೋಳಿಗಳು ಕಾಡು ಪ್ರಾಣಿಗಳಿಗೆ, ನಾಯಿಗೆ ಬಲಿಯಾಗುತ್ತಿರುವುದಕ್ಕೆ ಯಾವ ಕುರುಹುಗಳು ಸಿಕ್ಕಿರಲಿಲ್ಲ. ಈ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸಿದ ಗ್ರಾಮಸ್ಥರಿಗೆ ಆಶ್ಚರ್ಯ ಕಾದಿತ್ತು  ಭಿಕ್ಷಾಟನೆ ಮಾಡಿಕೊಂಡು ಬೀದಿ ಬೀದಿ  ತಿರುಗುತ್ತಿದ್ದ ಮೂವರು ಮಹಿಳೆಯರು ಕೋಳಿ ಕಳ್ಳತನದಲ್ಲಿ ತೊಡಗಿಕೊಂಡಿರುವ ಸತ್ಯ ಬಯಲಾಗಿತ್ತು. ಅವರನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. 
 
ಭಿಕ್ಷೆ ಬೇಡಿಕೊಂಡು ಅಲೆಯುತ್ತಿದ್ದ ಇವರು ಕೋಳಿಗಳನ್ನು ಕಂಡಾಗ ಮತ್ತು ತರಿಸುವ ಔಷಧಿ ಮಿಶ್ರಿತ ಅಕ್ಕಿ ಹಾಕುತ್ತಿದ್ದರು. ಈ ಅಕ್ಕಿಯನ್ನು ತಿಂದ ನೆಲಕ್ಕುರುಳುತ್ತಿದ್ದ ಕೋಳಿಗಳನ್ನ ಎತ್ತುಕೊಂಡು ಪರಾರಿಯಾಗುತ್ತಿದ್ದರು. ನಿನ್ನೆ ಇದು ಸಾರ್ವಜನಿಕರ ಗಮನಕ್ಕೆ ಬಂದಿದ್ದು, ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ