ರೈತರ ಮೇಲೆ ಪೊಲೀಸ್ ದೌರ್ಜನ್ಯ: ಕೋಲಾರ್- ಚಿಕ್ಕಬಳ್ಳಾಪುರ ಬಂದ್

ಶುಕ್ರವಾರ, 4 ಮಾರ್ಚ್ 2016 (12:01 IST)
ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದ ರೈತರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ಇಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ್ ಬಂದ್‌ಗೆ ಕರೆ ನೀಡಲಾಗಿದೆ.

 
ಶಾಶ್ವತ ನೀರಾವರಿ ಹೋರಾಟ ಸಮಿತಿ ಈ ಬಂದ್‌ಗೆ ಕರೆ ನೀಡಿದ್ದು, ಎರಡು ಜಿಲ್ಲೆಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪಂಜಿನ ಮೆರವಣಿಗೆ ನಡೆಸಿವೆ. ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸಿಎಂ ಅಣಕು ಶವಯಾತ್ರೆ ನಡೆಸಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇಂದು ನಡೆಯಬೇಕಿದ್ದ ಪಿಯುಸಿ ಮತ್ತು  ಎಸ್ಎಲ್‌ಸಿಸಿ ಪರೀಕ್ಷೆಯನ್ನು ಸಹ ಮಾರ್ಚ್ 8 ಕ್ಕೆ ಮುಂದೂಡಲಾಗಿದೆ.
 
ಕೋಲಾರದಲ್ಲಿ ಸಹ ಪ್ರತಿಭಟನೆ ಕಾವು ಹೆಚ್ಚುತ್ತಿದ್ದು ಕೆಎಸ್‌ಆರ್‌ಟಿಸಿ ವೃತ್ತದಲ್ಲಿ ಟೈರ್ ಸುಟ್ಟಿ, ಬಸ್ ತಡೆದು ಪ್ರತಿಭಟನಾಕಾರರು ಆಕ್ರೋಶವನ್ನು ಪ್ರದರ್ಶಿಸಿದ್ದಾರೆ. ಎಪಿಎಂಸಿ ಬಳಿ ಬಸ್, ಲಾರಿಗಳಿಗೆ ಕಲ್ಲೆಸೆಯಲಾಗಿದೆ. ಕೋಲಾರ ಸಂಪೂರ್ಣ ಸ್ತಬ್ಧವಾಗಿದ್ದು, ಚೆನ್ನೈ- ಬೆಂಗಳೂರು ಹೆದ್ದಾರಿಯ ಮೇಲೆ ಸಹ ಪರಿಣಾಮ ಉಂಟಾಗಿದೆಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್  ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. 
 
ಕೋಲಾರ ನಗರದಲ್ಲಿರುವ ಸಂಸದ, ಕಾಂಗ್ರೆಸ್ ನಾಯಕ ಕೆ.ಹೆಚ್. ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಿರುವ ನೂರಾರು ರೈತರು ಜಿಲ್ಲೆಗೆ 
ನೀರು ತರುವ ವಿಚಾರದಲ್ಲಿ ನಿರ್ಲಕ್ಷ ತೋರಿದ್ದಾರೆ ಎಂದು ಕಿಡಿಕಾರಿದ್ದಾರೆ. ಶಾಸಕ ವರ್ತೂರು ಪ್ರಕಾಶ್ ಮನೆಗೂ ಮುತ್ತಿಗೆ ಹಾಕಲಾಗಿದ್ದು, ಅವರ ಮನೆಯ ಮುಂದಿದ್ದ ಪ್ಲೆಕ್ಸ್, ಬ್ಯಾನರ್ ಕಿತ್ತು ಕರವೇ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ