ಲಂಚ ಸ್ವೀಕರಿಸುತ್ತಿದ್ದ ಪೊಲೀಸರು ಲೋಕಾಯುಕ್ತ ಬಲೆಗೆ: ದೂರು ದಾಖಲು

ಶುಕ್ರವಾರ, 29 ಮೇ 2015 (17:04 IST)
ಬಂಧಿತವಾಗಿದ್ದ ಕಾರನ್ನು ಬಿಡುಗಡೆಗೊಳಿಸುವ ಸಲುವಾಗಿ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಜಿಲ್ಲೆಯ ಗುಬ್ಬಿ ಠಾಣೆಯ ಪಿಎಸ್‌ಐ ಹಾಗೂ ಓರ್ವ ಪೊಲೀಸ್ ಪೇದೆ ಇಂದು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. 
 
ಹೌದು, ಬಲೆಗೆ ಬಿದ್ದ ಪೊಲೀಸರನ್ನು ಗುಬ್ಬಿ ಠಾಣೆಯ ಪಿಎಸ್ಐ ಹೆಚ್.ಟಿ ವಸಂತ ಹಾಗೂ ಪೇದೆ ರಮೇಶ್ ಎಂದು ಹೇಳಲಾಗಿದ್ದು, ಇವರೊಂದಿಗೆ ಮಧ್ಯವರ್ತಿಯಾಗಿ ರಾಜಶೇಖರ್ ಎಂಬಾತನೂ ಸೇರಿಕೊಂಡಿದ್ದ ಎಂದು ತಿಳಿದು ಬಂದಿದೆ. 
 
ಘಟನೆ ವಿವರ: ಕೊಲೆ ಯತ್ನ ಆರೋಪದಲ್ಲಿ ಜಪ್ತಿ ಮಾಡಲಾಗಿದ್ದ ಕಾರನ್ನು ಬಿಡುಗೊಳಿಸುವಂತೆ ಗುಬ್ಬಿ ನ್ಯಾಯಾಲಯ ಆದೇಶ ನೀಡಿತ್ತು. ಈ ನಡುವೆಯೂ ಕೋರ್ಟ್ ಆದೇಶವನ್ನೇ ಧಿಕ್ಕರಿಸಿದ ಗುಬ್ಬಿ ಠಾಣೆ ಪೊಲೀಸರು ಕಾರು ಮಾಲಿಕರಿಂದ 50 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರು ಮಾಲೀಕ ಸುರೇಶ್ ಹಣ ನೀಡುವುದಾಗಿ ಒಪ್ಪಿಕೊಂಡು ಇಂದು 15 ಸಾವಿರ ಹಣ ನೀಡಲು ಮುಂದಾಗಿದ್ದರು. ಈ ವೇಳೆ ಗೌಪ್ಯವಾಗಿ ದಾಳಿ ನಡೆಸಿದ ಲೋಕಾಯುಕ್ತರು ಆರೋಪಿ ಪೊಲೀಸರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
 
ಲೋಕಾಯುಕ್ತ ಪೊಲೀಸರನ್ನು ಕಂಡ ಪೇದೆ ಹಾಗೂ ಮಧ್ಯವರ್ತಿ ರಾಜಶೇಖರ್ ಕೂಡಲೇ ಕಾಲ್ಕಿತ್ತಿದ್ದು, ತಲೆ ಮರೆಸಿಕೊಂಡಿದ್ದಾರೆ. ಆದರೂ ಪಿಎಸ್ಐ ಸೇರಿದಂತೆ ಮೂವರ ಮೇಲೂ ಕೂಡ ಲೋಕಾಯುಕ್ತ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನು ಕಾರು ಮಾಲೀಕ ಸುರೇಶ್ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ