ರೇಪ್ ದೂರುಗಳ ಸ್ವೀಕಾರಕ್ಕೆ ವಾಟ್ಸ್‌ಪ್ ಬಳಕೆಗೆ ಪೊಲೀಸರ ಚಿಂತನೆ

ಭಾನುವಾರ, 20 ಜುಲೈ 2014 (16:08 IST)
ಬೆಂಗಳೂರು ನಗರದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಾಟ್ಸ್ ಅಪ್ ಮೂಲಕ ದೂರು ಸ್ವೀಕರಿಸಲು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.
 
ಫ್ರೇಜರ್‌ಟೌನ್ ಅತ್ಯಾಚಾರ, ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಸೆಮಿನರಿ ಸಿಸ್ಟರ್ ವಿರುದ್ಧದ ಅತ್ಯಾಚಾರ ಪ್ರಕರಣ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆದಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವಹಿಸಿಕೊಂಡಿರುವ ರೆಡ್ ಬ್ರಿಗೇಡ್ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು, ಯುವ ಜನತೆ ಹೆಚ್ಚಾಗಿ ಬಳಕೆ ಮಾಡುತ್ತಿರುವ ವಾಟ್ಸ್ ಅಪ್ ಮೂಲಕ ದೂರು ಸ್ವೀಕರಿಸಲು ಚಿಂತನೆ ನಡೆಸುತ್ತಿರುವುದಾಗಿ ಭರವಸೆ ನೀಡಿದರು.
 
ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಇಲಾಖೆ ಕೈಗೊಳ್ಳಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗೊಳ್ಲುತ್ತೇವೆ. ಮಹಿಳಾ ಸುರಕ್ಷತೆಗಾಗಿಯೇ ಮಹಿಳಾ ಸಿಬ್ಬಂಧಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಠಾಣೆಗಳಲ್ಲಿ ವಾಟ್ಸ್ ಅಪ್ ಬಳಕೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಪ್ರತಿ ಠಾಣೆಯ ಮೊಬೈಲ್‌ಗಳಲ್ಲಿ ವಾಟ್ಸ್ ಅಪ್ ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಔರಾದ್ಕರ್ ಅವರು ಹೇಳಿದರು.
 
ರಾಘವೇಂದ್ರ ಔರಾದ್ಕರ್ ಅವರೊಂದಿಗೆ ಪ್ರತಿಭಟನವಾ ಸ್ಥಳಕ್ಕೆ ಡಿಸಿಪಿ ಲಾಬೂರಾಮ್, ಜಂಟಿ ಆಯುಕ್ತ ರವಿ ಅವರು ಕೂಡ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದರು.
 
ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಕಳೆದ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದು ಕೂಡ ಮುಂದುವರೆದಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೆಡ್ ಬ್ರಿಗೇಡ್ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ಇತ್ತ ಕಬ್ಬನ್ ಪಾರ್ಕ್‌ನಲ್ಲಿಯೂ ಅತ್ಯಾಚಾರದ ವಿರುದ್ಧ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಇನ್ನುಳಿದಂತೆ ಕೊಡಗು, ಚಾಮರಾಜ ನಗರ, ಮೈಸೂರು, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಂಡಿವೆ.

ವೆಬ್ದುನಿಯಾವನ್ನು ಓದಿ