ಮಹಿಳೆಯರ ಮೇಲೆ ಖಾಕಿ ದೌರ್ಜನ್ಯ: ಮೂವರು ಪೇದೆಗಳು ಅಮಾನತು

ಶನಿವಾರ, 5 ಸೆಪ್ಟಂಬರ್ 2015 (15:12 IST)
ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಐವರು ಸಾರ್ವಜನಿಕ ಮಹಿಳೆಯರ ಮೇಲೆ ಖಾಕಿ ದೌರ್ಜನ್ಯ ಮೆರೆದಿದ್ದ ಮೂವರು ಪುರುಷ ಪೊಲೀಸ್ ಪೇದೆಗಳನ್ನು ನಗರ ಪೊಲೀಸ್ ಆಯುಕ್ತ ಎಸ್.ರವಿ ಅವರು ಇಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. 
 
ಅಮಾನತಾದ ಪೇದೆಗಳನ್ನು ಎಂ.ಜಿ.ಕುರೇರ್, ಐ.ಎಸ್.ಪಾಟೀಲ್ ಹಾಗೂ ಬಾಬಾನಗರಿ ಎಂದು ತಿಳಿದು ಬಂದಿದ್ದು, ಸೇವೆಯಿಂದ ಶಾಸ್ವತವಾಗಿ ಅಮಾನತುಗೊಳಿಸಿದ್ದಾರೆ.  
 
ಈ ಸಂಬಂಧ ಪೊಲೀಸ್ ಆಯುಕ್ತ ಎಸ್.ರವಿ ಅವರೇ ಪ್ರತಿಕ್ರಿಯಿಸಿದ್ದು, ತತ್ ಕ್ಷಣಕ್ಕೆ ವಿಡಿಯೋದಲ್ಲಿನ ದೃಶ್ಯಾವಳಿಗಳನ್ನಾಧರಿಸಿ ಕ್ರಮ ಕೈಗೊಳ್ಳಲಾಗಿದ್ದು, ಮೂವರು ಪೇದೆಗಳನ್ನು ಅಮಾನತುಗೊಳಿಸಲಾಗಿದೆ. ಇತರೆ ಇಬ್ಬರು ಮಹಿಳಾ ಪೇದೆಗಳ ಬಗ್ಗೆ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ. 
 
ಇನ್ನು ಇದೇ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಪ್ರತಿಕ್ರಿಯಿಸಿದ್ದು, ಮಾಧ್ಯಮಗಳಲ್ಲಿ ಬಿತ್ತರವಾದ ವಿಡಿಯೋವನ್ನು ಗಮನಿಸಿದೆ. ಪೊಲೀಸರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವುದು ನಿಜಕ್ಕೂ ಹೇಯ. ಆ ಬಗ್ಗೆ ಸೂಕ್ತ ವರದಿ ತರಿಸಿಕೊಂಡು ನೋಟಿಸ್ ನೀಡುವ ಮೂಲಕ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. 
 
ಇನ್ನು ನಗರದ ಕೆಲ ವರ್ತಕರು ನೀಡಿದ ಮಾಹಿತಿ ಆಧಾರದ ಮೇಲೆ ನಗರದ ಖೇಡೆ ಬಜಾರ್ ಠಾಣೆಯ ಪೊಲೀಸರು ನಿನ್ನೆ ಐವರು ಮಹಿಳೆಯರ ಮೇಲೆ ದಾಳಿ ನಡೆಸಿ ಸಾರ್ವಜನಿಕವಾಗಿಯೇ ಲಾಠಿ ಚಾರ್ಜ್ ಮಾಡುವ ಮೂಲಕ  ಪೈಶಾಚಿಕ ಕೃತ್ಯ ಎಸಗಿ ಖಾಕಿ ದರ್ಪ ಮೆರೆದಿದ್ದರು. ಈ ಹಿನ್ನೆಲೆಯಲ್ಲಿ ಆಯುಕ್ತರು ಮೂವರೂ ಪುರುಷ ಪೇದೆಗಳನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ತನಿಖೆಗೆ ಆದೇಶಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ