ಚುನಾವಣೆಯಲ್ಲಿ ಮಾತ್ರ ಅಹಿಂದಾ, ಹಿಂದುತ್ವ ಬಳಕೆ: ಸಚಿವ ಜಾರಕಿಹೊಳಿ ಅಸಮಧಾನ

ಶನಿವಾರ, 10 ಅಕ್ಟೋಬರ್ 2015 (17:57 IST)
ನಗರದಲ್ಲಿ ಆಯೋಜಿಸಲಾಗಿದ್ದ ದಲಿತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೋಳಿ ಅವರು ರಾಜಕೀಯ ಪಕ್ಷಗಳ ವಿರುದ್ಧ ಗುಡುಗಿದ್ದು, ರಾಜಕೀಯ ಪಕ್ಷಗಳು ಅಹಿಂದಾ, ಹಿಂದುತ್ವ ಎಂಬ ಪದಗಳನ್ನು ಬಳಸಿಕೊಂಡು ಅಧಿಕಾರದ ಗದ್ದುಗೆ ಏರುತ್ತಿವೆ. ಆದರೆ ಕೆಳ ವರ್ಗದವರು ಶೋಷಣೆಗೆ ಒಳಗಾದಾಗ ಅವರ ಸಮಸ್ಯೆ ಬಗೆಹರಿಸಲು ಯಾವ ಪಕ್ಷಗಳೂ ಬರುವುದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 
 
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಅಧಿಕಾರದ ಗದ್ದುಗೆ ಏರಲು ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳು ದಲಿತರ ಪರವಾಗಿ ಅಹಿಂದಾ, ಹಿಂದುತ್ವ ಎಂಬ ಪದಗಳನ್ನು ಬಳಸಿಕೊಂಡು ಅಧಿಕಾರದ ಗದ್ದುಗೆ ಏರುವಲ್ಲಿ ಸಫಲವಾಗುತ್ತಿವೆ. ಆದರೆ ಅಧಿಕಾರ ಹಿಡಿದ ಬಳಿಕ ಶೋಷಿತ ವರ್ಗವಾದ ದಲಿತ ಸಮುದಾಯದ ಸಮಸ್ಯೆಗಳಿಗೆ ಸ್ಪಂಧಿಸದೆ ಕಡೆಗಣಿಸುತ್ತಿವೆ. ದಲಿತರನ್ನು ಕೇವಲ ಚುನಾವಣೆ ಸಲುವಾಗಿ ಮಾತ್ರ ಪರಿಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.  
 
ಇದೇ ವೇಳೆ, ದಲಿತರು ಪೊಲೀಸರಿಂದಲೂ ಕೂಡ ಶೋಷಣೆಗೊಳಗಾಗುತ್ತಿದ್ದು, ಇದಕ್ಕೆ ಉತ್ತಮ ನಿದರ್ಶನವೊಂದನ್ನು ನಾವು ನಿನ್ನೆ ಮಾಧ್ಯಮಗಳಲ್ಲಿ ನೋಡಿದ್ದೇವೆ ಎಂದರು. 
 
ವ್ಯಕ್ತಿಯೋರ್ವ ತನ್ನನ್ನು ದರೋಡೆ ಮಾಡಿದವರನ್ನು ಕೂಡಲೇ ಬಂಧಿಸಿ ಎಂದು ದೂರು ನೀಡಲು ನಿನ್ನೆ ದೆಹಲಿ ಸಮೀಪದ ನೋಯ್ಡಾ ನಗರದ ಪೊಲೀಸ್ ಠಾಣೆಯೊಂದಕ್ಕೆ ಆಗಮಿಸಿದ್ದ. ಈ ವೇಳೆ ನ್ಯಾಯ ಒದಗಿಸಬೇಕಿದ್ದ ಪೊಲೀಸರು ದೂರು ನೀಡಲು ಬಂದಿದ್ದ ವ್ಯಕ್ತಿ ಹಾಗೂ ಆತನ ಕುಟುಂಬದವರನ್ನು ನಡುರಸ್ತೆಯಲ್ಲಿ ವಿವಸ್ತ್ರಗೊಳಿಸಿ ಅಮಾನವೀಯತೆ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ