ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣ: ಕೋರ್ಟ್‌ಗೆ ಹಾಜರಾದ ರಾಘವೇಶ್ವರ ಶ್ರೀ

ಶುಕ್ರವಾರ, 9 ಅಕ್ಟೋಬರ್ 2015 (14:27 IST)
ತಮ್ಮ ವಿರುದ್ಧ ದಾಖಲಾಗಿರುವ ಮೊದಲನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಭಾರತಿ ಶ್ರೀಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. 
 
ತಮ್ಮ ಮಠದಲ್ಲಿ ರಾಮಕಥಾ ಗಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೇಮಲತಾ ಅವರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ನಡುವೆ ಶ್ರೀಗಳು ಜಾಮೀನು ಅರ್ಜಿ ಸ್ಲಲಿಸಿ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನನ್ನು ಪಡೆದಿದ್ದರು. ಆದರೆ ಜಾಮೀನು ನೀಡುವ ವೇಳೆ ನ್ಯಾಯಾಲಯ ನೀಡಿದ್ದ ಷರತ್ತುಗಳನ್ನು ಶ್ರೀಗಳು ಪೂರೈಸಿರಲಿಲ್ಲ. ಪರಿಣಾಮ ಕೋರ್ಟ್ ನಿನ್ನೆ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿ ಅಗತ್ಯವಾಗಿ ಸಲ್ಲಿಸಬೇಕಿದ್ದ ಎಲ್ಲಾ ದಾಖಲಾತಿ ಷರತ್ತುಗಳನ್ನು ಪೂರೈಸುತ್ತಿದ್ದಾರೆ. 
 
ಮಠದಲ್ಲಿ ಗಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ದೂರುದಾರೆ ಪ್ರೇಮಲತಾ, ಶ್ರೀಗಳು ನಾನು ರಾಮನ ಅವತಾರವಾಗಿದ್ದು, ನನ್ನನ್ನು ರಾಮ ಎಂದು ತಿಳಿದುಕೋ ಎಂದು ರಾಮನ ಹೆಸರೇಳಿಕೊಂಡು ನಂಬಿಸಿ ನನ್ನ ಮೇಲೆ 169 ಬಾರಿ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳು ಅತ್ಯಾಚಾರ ಪ್ರಕರಣದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. 
 
ಇನ್ನು ಆರೋಪ ಪಟ್ಟಿ ಸಲ್ಲಿಕೆಯಾಗಿರುವ ಕಾರಣ ನಗರದ 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದ ಈ ಪ್ರಕರಣವನ್ನು ನಗರದ ಸೆಷನ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. 

ವೆಬ್ದುನಿಯಾವನ್ನು ಓದಿ