ರಾಘವೇಶ್ವರ ಶ್ರೀಗೆ ಬೆದರಿಕೆ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಶಾಸ್ತ್ರೀ ದಂಪತಿಗಳು

ಬುಧವಾರ, 17 ಸೆಪ್ಟಂಬರ್ 2014 (11:43 IST)
ರಾಮಕಥಾ ಕಲಾವಿದರಿಗೆ ಬೆದರಿಕೆ ಒಡ್ಡಿದ ಆರೋಪದಡಿ ಬಂಧಿತರಾಗಿ, 21 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಪ್ರೇಮಲತಾ- ದಿವಾಕರ ಶಾಸ್ತ್ರಿ ದಂಪತಿಗೆ ಹೊನ್ನಾವರದ ಜೆಎಂಎಫ್‌ಸಿ ಪ್ರಧಾನ ನ್ಯಾಯಾಲಯ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದ್ದು ಇಂದು ಮುಂಜಾನೆ ದಂಪತಿಗಳು ಕಾರವಾರದ ಜಿಲ್ಲಾ ಕಾರಾಗೃಹದಿಂದ ಹೊರ ಬಂದಿದ್ದಾರೆ.

ಅಲ್ಲಿಂದ ದಂಪತಿಗಳು ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದಾರೆ. 
 
ಮಾಧ್ಯಮದವರಿಗೆ ಪ್ರತಿಕ್ರಿಯಿಸಲು ಪ್ರೇಮಲತಾ ನಿರಾಕರಿಸಿದ್ದು, ಅವರ ಪತಿ "ನಮಗೆ ನೋವಾಗಿದೆ, ಕಾನೂನುಬದ್ಧ ಹೋರಾಟ ನಡೆಸುತ್ತೇವೆ" ಎಂದಷ್ಟೇ ಹೇಳಿದ್ದಾರೆ. 
 
ತಲಾ 10,000 ರೂಪಾಯಿಗಳ ಬಾಂಡ್ ನೀಡಬೇಕು. ಪ್ರತಿ ತಿಂಗಳ ಎರಡನೇ ಶನಿವಾರ ತನಿಖಾಧಿಕಾರಿ ಎದುರು ಹಾಜರಾಗಬೇಕು, ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು ಎನ್ನುವ ಷರತ್ತನ್ನು ವಿಧಿಸಿ ನ್ಯಾಯಾಧೀಶೆ ಎಂ.ಎಸ್ ಹರಿಣಿ ಜಾಮೀನು ಮಂಜೂರು ಮಾಡಿದರು.
 
''3 ಕೋಟಿ ಹಣ ನೀಡಬೇಕು. ಇಲ್ಲದಿದ್ದರೆ ರಾಘವೇಶ್ವರ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಮಠ ನಡೆಸುವ ರಾಮಕಥಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾವಿದರಿಗೆ ಪ್ರೇಮಲತಾ,ಅವರ ಪತಿ ದಿವಾಕರ ಶಾಸ್ತ್ರಿ ಹಾಗೂ ಪತಿಯ ಸಹೋದರ ನಾರಾಯಣ ಶಾಸ್ತ್ರಿ ಬೆದರಿಕೆ ಹಾಕಿದ್ದರು'' ಎಂದು ಮಠದ ಕಡೆಯಿಂದ  ಆಗಸ್ಟ್ 16ರಂದು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು. 
 
ಆಗಸ್ಟ್ 26ರಂದು ಶಾಸ್ತ್ರಿ ದಂಪತಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ್ದ ಹೊನ್ನಾವರ ಪೊಲೀಸರು ಮರುದಿನ ಹೊನ್ನಾವರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 
 
ಪ್ರಕರಣದ ಹೆಚ್ಚಿನ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ