ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆ ಸುದ್ದಿಗೋಷ್ಠಿ: ಯಾರಿಗೂ ಅನ್ಯಾಯವಾಗಿಲ್ಲ ಎಂದ ಕಿಮ್ಮನೆ

ಶುಕ್ರವಾರ, 22 ಮೇ 2015 (15:06 IST)
ಪಿಯುಸಿ ಫಲಿತಾಂಶದಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಪ್ರತಿಕ್ರಿಯಿಸಿದ್ದು, ಇಲಾಖೆಯಿಂದ ಕೆಲ ತಪ್ಪುಗಳಾಗಿವೆ. ಆದರೆ ಇತರೆ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ದಾಖಲಾಗಿರುವ ತಪ್ಪುಗಳು ಕಡಿಮೆ. ಇವು ಸಾಮಾನ್ಯವೂ ಕೂಡ ಎಂದ ಅವರು, ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಮನವರಿಕೆ ಮಾಡುವಲ್ಲಿ ನಮ್ಮ ಅಧಿಕಾರಿಗಳು ಎಡವಿದ್ದಾರೆ ಎಂದಿದ್ದಾರೆ. 
 
ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಪ್ಪಾಗಿ ಮುದ್ರಿತವಾಗಿದ್ದ ಪ್ರಶ್ನೆಗಳಿಗೆ ಕೃಪಾಂಕವನ್ನು ಇಲಾಖಾಧಿಕಾರಿಗಳು ನೀಡಿದ್ದಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವು ನಿಯಮಗಳಿದ್ದು, ಅವುಗಳನ್ನು ಅಧಿಕಾರಿಗಳು ಪಾಲಿಸಲೇಬೇಕು. ಯಾವ ವಿದ್ಯಾರ್ಥಿ ತಪ್ಪು ಪ್ರಶ್ನೆಯಾದರೂ ಉತ್ತರಿಸಲು ಮುಂದಾಗಿದ್ದಾನೋ ಅಂತ ವಿದ್ಯಾರ್ಥಿಗಳಿಗೆ ಮಾತ್ರ ನಿಗಧಿಪಡಿಸಿರುವ ಕೃಪಾಂಕಗಳನ್ನು ನೀಡಲಾಗುತ್ತದೆ. ಅಂತೆಯೇ ಈ ಬಾರಿಯೂ ಕೂಡ ಅದೇ ರೀತಿಯಾಗಿ ನೀಡಲಾಗಿದೆ. ಒಂದು ವೇಳೆ ನೀಡಲಾಗಿಲ್ಲ ಎಂದು ಕೃಪಾಂಕಕ್ಕಾಗಿ ಅರ್ಜಿ ಸಲ್ಲಿಸಿದರೂ ಕೂಡ ಪರಿಗಣಿಸಲಾಗುತ್ತದೆ. ಅದಕ್ಕೆ ಫೀ ಪಾವತಿಸಬೇಕಿಲ್ಲ. ಆದರೆ ಈ ವಿಷಯದಲ್ಲಿ ಯಾವ ವಿದ್ಯಾರ್ಥಿಗಳಿಗೂ ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. 
 
ಫಲಿತಾಂಶವನ್ನು ನೋಡಲು ಎಲ್ಲರೂ ಕಾತರದಿಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಒಂದೇ ವೆಬ್‌ಸೈಟ್ ಬಳಸಿ ಅಂತರ್ಜಾಲದಲ್ಲಿ ಸರ್ವರ್ ಬ್ಯುಸಿ ಎಂದು ಬಂದಲ್ಲಿ ವಿದ್ಯಾರ್ಥಿಗಳು ದುಗುಡಕ್ಕೊಳಗಾಗುತ್ತಾರೆ ಎಂಬ ದೃಷ್ಟಿಯಿಂದ ಖಾಸಗಿ ವೆಬ್‌ಸೈಟ್‌ಗಳಿಗೂ ಫಲಿತಾಂಶ ಪ್ರಕಟಿಸಲು ಅವಕಾಶ ನೀಡಲಾಗಿತ್ತು. ಆದರೆ ಅವರು ಇಲಾಖೆಯ ಮೂಲ ಫಲಿತಾಂಶವನ್ನು ಕಾಪಿ ಮಾಡುವ ಸಂದರ್ಭದಲ್ಲಿ ತಪ್ಪೆಸಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಷಯಗಳ ಅದಲು ಬದಲಾಗಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ ಎಂದರು.
 
ಹೆಚ್‌ಟಿ ಮೀಡಿಯಾಗೆ ಸೇರಿದ www.resultout.com ನಿಂದ ಈ ಸಮಸ್ಯೆ ಉದ್ಭವವಾಗಿದ್ದು, ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಮಾಡಿದ ತಪ್ಪಿನಿಂದ ಮಾತ್ರ ಸಮಸ್ಯೆ ಉದ್ಭವವಾಗಿದೆ ಎಂದು ಮಾಹಿತಿ ನೀಡಿದರು.  
 
ಇದೇ ವೇಳೆ, ಮಕ್ಕಳೂ ಕೂಡ ಪರೀಕ್ಷಾ ಕೇಂದ್ರಗಳಲ್ಲಿ ಕೆಲ ತಪ್ಪುಗಳನ್ನು ಮಾಡಿದ್ದು, ಕನ್ನಡದ ಬದಲು ಸಂಸ್ಕೃತ ಎಂದು ನಮೂದಿಸಿ ಕನ್ನಡ ಪ್ರಶ್ನೆ ಪತ್ರಿಕೆಗೆ ಉತ್ತರಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ವಿಷಯಗಳ ಅದಲು ಬದಲಾಗಿರುತ್ತದೆ. ಇಂತಹ ಸಮಸ್ಯೆಗಳು ಮಕ್ಕಳು ಮತ್ತು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಂದ ಆಗಿರುತ್ತವೆ. ಅದನ್ನು ಈಗಾಗಲೇ ಪರಿಶೀಲಿಸಲಾಗಿದೆ ಎಂದರು. 
 
ಇನ್ನು ಉತ್ತರ ಪತ್ರಿಕೆಯಲ್ಲಿ ರೆಜಿಸ್ಟರ್ ನಂಬರ್‌ ಬರೆಯುವಾಗ ತಪ್ಪಾಗಿದ್ದು, ಅದರಿಂದಲೂ ಕೂಡ ತೊಂದರೆಯಾಗಿದ್ದು, ಅಂತಹ 160 ಪ್ರಕರಣಗಳು ಈ ಬಾರಿ ಕಂಡು ಬಂದಿವೆ ಎಂದ ಅವರು, ಇದನ್ನು  2012ನೇ ಸಾಲಿಗೆ ಹೋಲಿಸಿದಲ್ಲಿ ಸುಧಾರಣೆಯಾಗಿದೆ. ಅಂದು 3500 ಪ್ರಕರಣಗಳು ದಾಖಲಾಗಿದ್ದವು. ಅಂತೆಯೇ ಆತುರತೆಯಲ್ಲಿ ಹೆಸರು ಬರೆಯುವಲ್ಲಿ ಬಿಟ್ಟಿದ್ದಾರೆ. ಅಲ್ಲಿಯೂ ತಪ್ಪಾಗಿದ್ದು, 27 ಪ್ರಕರಣ ದಾಖಲಾಗಿವೆ ಆದರೆ ಅವರಿಗೂ ನ್ಯಾಯ ಒದಗಿಸಲಾಗಿದೆ ಎಂದರು. 
 
ಇನ್ನು ವಿಜ್ಞಾನ ವಿಭಾಗದ ಮಕ್ಕಳಿಗೆ ತೀವ್ರವಾಗಿ ನೋವು ಕಾಡುತ್ತಿರಬಹುದು. ಏಕೆಂದರೆ ವಿಜ್ಞಾನ ವಿಭಾಗದ ಪಿಸಿಬಿ ವಿದ್ಯಾರ್ಥಿಗಳಿಗೆ ಕೆಲ ನಿಯಮಗಳು ಅನ್ವಯವಾಗಲಿದ್ದು, ಥಿಯರಿಯಲ್ಲಿ 21 ಅಂಕ ಗಳಿಸಲೇಬೇಕು ಎಂಬುದು ನಿಯಮ. ಅಲ್ಲದೆ ಅಷ್ಟು ಅಂಕಗಳನ್ನು ಸಾಮಾನ್ಯ ಉತ್ತೀರ್ಣಕ್ಕೆಂದು ನಿಗದಿಪಡಿಸಲಾಗಿದೆ. ಅದಕ್ಕಿಂತ ಕಡಿಮೆ ಬಂದಲ್ಲಿ ಅನುತ್ತೀರ್ಣ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಮತ್ತೊಂದು ವಿಚಾರ ಎಂದರೆ ಥಿಯರಿಯಲ್ಲಿ 21 ಅಂಕ ಗಳಿಸದೆ ಪ್ರಾಯೋಗಿಕವಾಗಿ 30ಕ್ಕೆ 30 ಅಂಕಗಳನ್ನು ಪಡೆದು ಒಟ್ಟು 50 ಅಂಕ ನಮೂದಾಗಿದ್ದರೂ ಕೂಡ ಆ ವಿದ್ಯಾರ್ಥಿ ಅನುತ್ತೀರ್ಣನೇ ಎಂದು ಅರ್ಥ ಒತ್ತಾಗಿ ತಿಳಿಸಿದರು. 
 
ಅಂಕ ನೀಡುವಲ್ಲಿ ಮಂಡಳಿ ದ್ವಂದ್ವ ನೀತಿ ಅನುಸರಿಸಿದ್ದು, ನಮಗೆ ಅನ್ಯಾಯವಾಗಿದೆ. ಒಂದೊಂದು ವೆಬ್ ಸೈಟ್ ನಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶಿತವಾಗುತ್ತಿದೆ ಎಂದು ಆರೋಪಿಸಿ ಪರೀಕ್ಷಾ ಮಂಡಳಿಯ ವಿರುದ್ಧ ಕಳೆದ ನಾಲ್ಕು ದಿನಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆಯಲ್ಲಿ ತೊಡಗಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಇಂದು ಸುದ್ದಿಗೋಷ್ಠಿ ಕರೆದು ಈ ಎಲ್ಲಾ ಅಂಶಗಳನ್ನು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ