ಜಾನಪದ ವಿವಿಯಲ್ಲಿ ಪದೋನ್ನತಿ ಪ್ರಕರಣ: ಸರ್ಕಾರದ ಆದೇಶಕ್ಕೂ ಬೆಲೆ ನೀಡದ ಕುಲಪತಿ

ಶನಿವಾರ, 23 ಮೇ 2015 (17:23 IST)
ರಾಷ್ಟ್ರದ ಏಕೈಕ ಜಾನಪದ ವಿವಿ ಎಂಬ ಖ್ಯಾತಿಗೆ ಹೆಸರಾಗಿರುವ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೋಟಗೋಡಿಯಲ್ಲಿನ ಜಾನಪದ ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದ್ದು, ಅಧಿಕಾರಿಯೋರ್ವರಿಗೆ ವಿವಿಯ ಕುಲಪತಿಗಳೇ ಕಾನೂನು ಬಾಹಿರವಾಗಿ ಪದೋನ್ನತಿ ನೀಡಿರುವ ಆರೋಪ ಕೇಳಿ ಬಂದಿದೆ.  
 
ವಿಶ್ವ ವಿದ್ಯಾಲಯದ ಕುಲಪತಿ ಡಾ.ಅಂಬಳಿಕೆ ಹರಿಯಣ್ಣ ಅವರೇ ಪ್ರಕರಣದ ಕೇಂದ್ರ ಬಿಂದುವಾಗಿದ್ದು, ಹಂಪಿ ವಿಶ್ವ ವಿದ್ಯಾಲಯದಿಂದ ಜಾನಪದ ವಿವಿಗೆ ಬಂದು ಹಂಗಾಮಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾಷಾಂತರ ವಿಭಾಗದ ಭೋದಕೇತರ ಅಧಿಕಾರಿಯೋರ್ವರಿಗೆ ವಿವಿಯ ಭಾಷಾಂತರ ವಿಭಾಗದ ನಿರ್ದೇಶಕರ ಪಟ್ಟ ನೀಡಿ ಕೂರಿಸಲಾಗಿದೆ. ಇದೆಲ್ಲವನ್ನೂ ಕೂಡ ಕುಲಪತಿಗಳು ವಿವಿಯ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಕೈಗೊಂಡು ಪದೋನ್ನತಿ ನೀಡಿದ್ದಾರೆ. ಇದು ಪ್ರಸ್ತುತದ ಆರೋಪವಾಗಿದೆ.  
 
ಆದರೆ, ಕುಲಪತಿಗಳ ಕಾರ್ಯ ವೈಖರಿಯನ್ನು ಕಂಡ ಸರ್ಕಾರದ ಕಾರ್ಯದರ್ಶಿಗಳು, ಈ ಪದೋನ್ನತಿ ಕಾನೂನು ಬಾಹಿರವಾಗಿದ್ದು, ಅವರನ್ನು ಪದೋನ್ನತಿಯಿಂದ ತೆರವುಗೊಳಿಸಿ. ಜೊತೆಗೆ ಈಗಾಗಲೇ ಯುಜಿಸಿ ಅಡಿಯಲ್ಲಿ ಪಡೆದಿರುವ ಸಂಬಳವನ್ನು ವಸೂಲಿ ಮಾಡಿ ಎಂದು ಸೂಚಿಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಕಳೆದ ಮೇ 7ರಂದು ಆದೇಶಿಸಿದ್ದರು ಎನ್ನಲಾಗಿದೆ.
 
ಇನ್ನು ಸರ್ಕಾರದ ಈ ಆದೇಶಕ್ಕೆ ಬೆಲೆ ಕೊಡದ ಕುಲಪತಿಗಳು ಇದನ್ನು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಕಾನೂನು ಬಾಹಿರವಲ್ಲ. ಅಲ್ಲದೆ ಪ್ರೇಮ್ ಕುಮಾರ್ ಅವರನ್ನು ಅದೇ ಪದವಿಯಲ್ಲಿ ಮುಂದುವರಿಯುವಂತೆ ಮತ್ತೊಮ್ಮೆ ಸಿಂಡಿಕೇಟ್ ಸಭೆ ಕರೆದು ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. 
 
ಹಂಪಿ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಪ್ರೇಮ್ ಕುಮಾರ್ ಎಂಬುವವರು ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲು ವಿವಿಗೆ ಬಂದವರಾಗಿದ್ದು, ಸಿಂಡಿಕೇಟ್ ಸದಸ್ಯರ ಮೇಲೆ ಒತ್ತಡ ತಂದು ಪದೋನ್ನತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.  
 
ಪ್ರೇಮ್ ಕುಮಾರ್ ಪ್ರಸ್ತುತ ಜಾನಪದ ವಿವಿಯ ಭಾಷಾಂತರ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದು, ವಿಭಾಗದ ಡೀನ್ ಕೂಡ ಇವರೇ ಆಗಿದ್ದಾರೆ ಎನ್ನಲಾಗುತ್ತಿದ್ದು, ಇವರು ಹಂಪಿ ವಿಶ್ವ ವಿದ್ಯಾಲಯದಲ್ಲಿ ಉಪ ಕುಲಪತಿಗಳಾಗಿಯೂ ಕಾರ್ಯ ನಿರ್ವಹಿಸಿದ್ದರು. 

ವೆಬ್ದುನಿಯಾವನ್ನು ಓದಿ