ಬಿಬಿಎಂಪಿ ಟಿಕೆಟ್ ನಲ್ಲಿ ಅನ್ಯಾಯ: ಕಾರ್ಯಕರ್ತೆ ಪ್ರತಿಭಟನೆ

ಬುಧವಾರ, 5 ಆಗಸ್ಟ್ 2015 (14:06 IST)
ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಪ್ರಚಾರದ ಸಿದ್ಧತೆಯಲ್ಲಿರುವ ಬಿಜೆಪಿ ತನ್ನ 96 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆಯೇ ಘೋಷಿಸಿತ್ತು. ಆದರೆ ಈ ಪಟ್ಟಿ ಸಮರ್ಪಕವಾಗಿಲ್ಲ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಹಿಳೆಯೋರ್ವರು ಪಕ್ಷದ ಮುಖ್ಯ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.
 
ನಗರದ ರಾಜ್ಯ ಬಿಜೆಪಿ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯನ್ನು ನಗರಗದ ವಿಜಯನಗರದ ನಿವಾಸಿ ಗಿರಿಜಾ ಎಂದು ತಿಳಿದು ಬಂದಿದ್ದು, ಹಲವು ವರ್ಷಗಳಿಂದ ಪಕ್ಷದ ಏಳಿಗಾಗಿ ದುಡಿದ ನನಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
 
ಬಿಜೆಪಿ ಮುಖಂಡರ ನಿರ್ಧಾರದ ವಿರುದ್ಧ ತಿರುಗಿ ಬಿದ್ದಿರುವ ಈ ಪ್ರತಿಭಟನಾನಿರತ ಮಹಿಳೆ, ನಿನ್ನೆ ಪಕ್ಷದ ಮುಖಂಡರು ಘೋಷಿಸಿರುವ 96 ಮಂದಿ ಅಭ್ಯರ್ಥಿಗಳ ಪೈಕಿ 52 ಮಂದಿ ಮಹಿಳೆಯರಿದ್ದಾರೆ. ಅದಕ್ಕೆ ನಾನು ಖುಷಿ ವ್ಯಕ್ತಪಡಿಸುತ್ತೇನೆ. ಆದರೆ ಇವರಲ್ಲಿ ಸ್ಥಾನ ಪಡೆದಿರುವ ಎಲ್ಲಾ ಮಹಿಳಾ ಅಭ್ಯರ್ಥಿಗಳು ಈ ಹಿಂದೆ ಅಧಿಕಾರ ಅನುಭವಿಸಿದ್ದ ಮಾಜಿ ಸದಸ್ಯರುಗಳ ಪತ್ನಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದುಂಬಾಲು ಬಿದ್ದು ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಆದರೆ ಈ ಮೂಲಕ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ. 
 
ಇನ್ನು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯ ಮನವೊಲಿಸುವಲ್ಲಿ ಪಕ್ಷದ ಮುಖಂಡರು ಸಫಲರಾಗಿದ್ದು, ತಮಗೂ ಸ್ಥಾನ ನೀಡುವ ಭರವಸೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ