ಕಳಂಕಿತ ಸಚಿವರ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆ ವಿಪಕ್ಷಗಳಿಂದ ಪ್ರತಿಭಟನೆ

ಶುಕ್ರವಾರ, 19 ಡಿಸೆಂಬರ್ 2014 (17:41 IST)
ಇಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪದಲ್ಲಿ ಸರ್ಕಾರದಲ್ಲಿ ಕೆಲ ಕಳಂಕಿತ ಸಚಿವರಿದ್ದು, ಅವರ ಬಗ್ಗೆ ಚರ್ಚಿಸಲು ಅವಕಾಶ ನೀಡಿ ಎಂದು ಪಟ್ಟು ಹಿಡಿದ ವಿರೋಧ ಪಕ್ಷಗಳ ಸದಸ್ಯರ ಒತ್ತಾಯವನ್ನು ಸಭಾಧ್ಯಕ್ಳ ಕಾಗೋಡು ತಿಮ್ಮಪ್ಪ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆಗಿಳಿದ ಸನ್ನಿವೇಶ ಕಂಡು ಬಂತು. 
 
ಕಲಾಪ ನಡೆಯುತ್ತಿದ್ದ ವೇಳೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ಎಲ್ಲಾ ಸದಸ್ಯರು, ಸಂಪುಟದಲ್ಲಿ ಕೆಲ ಕಳಂಕಿತ ಸಚಿವರಿದ್ದು, ಅವರ ಬಗ್ಗೆ ಚರ್ಚಿಸಲು ಅವಕಾಶ ನೀಡಿ ಎಂದು ಪಟ್ಟು ಹಿಡಿದಿದ್ದರು. ಆದರೆ ಸಚಿವರ ವಿರುದ್ಧದ ದೂರುಗಳು ಈಗಾಗಲೇ ನ್ಯಾಯಾಲಯದಲ್ಲಿ ಇರುವುದರಿಂದ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅನುಮತಿ ನೀಡದೇ ನಿರಾಕರಿಸಿದರು. 
 
ಇದರಿಂದ ಕುಪಿತಗೊಂಡ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಇತರೆ ವಿಷಯಗಳ ಚರ್ಚೆಗೆ ಅವಕಾಶ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.  
 
ಇನ್ನು ವಿಧಾನಪರಿಷತ್‌ನಲ್ಲಿ ಇದೇ ವಿಷಯವನ್ನು ವಿರೋಧ ಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಪ್ರಸ್ತಾಪಿಸಿದರು. ಆದರೆ ಇಲ್ಲಿಯೂ ಕೂಡ ಅನುಮತಿ ನೀಡಲು ಸಭಾಪತಿ ಶಂಕರಮೂರ್ತಿ ನಿರಾಕರಿಸಿದರು. ಆದರೆ ಬಿಜೆಪಿ ಸದಸ್ಯರು ಅವಕಾಶಕ್ಕಾಗಿ ಪಟ್ಟು ಹಿಡಿದು ಗದ್ದಲ ಎಬ್ಬಿಸಿದರು. ಗದ್ದಲದ ನಡುವೆಯೇ 4 ವಿಧೇಯಕಗಳನ್ನು ಅಂಗೀಕರಿಸಿ ಕಲಾಪವನ್ನು ಮುಂದೂಡಲಾಯಿತು.

ವೆಬ್ದುನಿಯಾವನ್ನು ಓದಿ