ಹೆಬ್ಬಾಳ ಭೀಕರ ಅಪಘಾತ ಹಿನ್ನೆಲೆ: ಪಾಲಿಕೆಯಿಂದ ಸ್ಕೈವಾಕರ್ ನಿರ್ಮಾಣ ಭರವಸೆ

ಶುಕ್ರವಾರ, 27 ಫೆಬ್ರವರಿ 2015 (13:56 IST)
ನಿನ್ನೆ ನಗರದ ಹೆಬ್ಬಾಳ ಬಳಿಯ ಕೆಂಪಾಪುರ ಜಂಕ್ಷನ್ ಬಳಿ ಸಂಭವಿಸಿದ್ದ ಭೀಕರ ಅಪಘಾತ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಎಕ್ಸಿಕ್ಯುಟೀವ್ ಎಂಜಿನಿಯರ್ ಶ್ರೀನಿವಾಸ್ ರೆಡ್ಡಿ ಅವರು ಸಾರ್ವಜನಿಕರ ಓಡಾಟಕ್ಕೆ ಅನುವಾಗುವಂತೆ ರಸ್ತೆಯ ಮೇಲೆ ಸ್ಕೈವಾಕರ್ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. 
 
ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಯ ಬಳಿಕ ಧರಣಿ ಸ್ಥಳಕ್ಕಾಗಮಿಸಿದ ಎಇ ರೆಡ್ಡಿ, ಸಾರ್ವಜನಿಕರ ಓಡಾಟಕ್ಕೆ ಅನುವಾಗುವಂತೆ ರಸ್ತೆಯ ಮೇಲೆ ಸ್ಕೈವಾಕರ್ ನಿರ್ಮಿಸುತ್ತೇವೆ. ಈ ಮೂಲಕ ಇನ್ನು ಯಾವುದೇ ಅಪಾಯದಂತಹ ಅವಘಡಗಳನ್ನು ತಡೆಯುತ್ತೇವೆ ಎಂದ ಅವರು ಕಾಮಗಾರಿಯನ್ನು ನಾಳೆಯಿಂದಲೇ ಆರಂಭಿಸಲಾಗುವುದು ಎಂದರು. 
 
ಇನ್ನು ನಿನ್ನೆ ಇಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ವೇಗವಾಗಿ ಚಲಿಸುತ್ತಿದ್ದ ವಾಟರ್ ಟ್ಯಾಂಕರ್‍‌ ಲಾರಿಯೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿಗಳ ಮೇಲೆ ಹರಿದ ಪರಿಣಾಮ ಓರ್ವ ಬೈಕ್ ಸವಾರ ಆನಂದ್ ಹಾಗೂ ಪಾದಚಾರಿ ಅರ್ಪಿತಾ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಘಟನೆಯಲ್ಲಿ ಖಂಡಿಸಿ ಇಂದು ನಗರದ ಪ್ರೆಸಿಡೆನ್ಸಿ, ಸಿಂಧಿ ಕಾಲೇಜು ಹಾಗೂ ವಿದ್ಯಾನಿಕೇತನ ಶಾಲೆಗಳ ವಿದ್ಯಾರ್ಥಿಗಳು ಈ ಕೆಂಪಾಪುರ ಜಂಕ್ಷನ್ ನಲ್ಲಿ ಸೇರಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಭೇಟಿ ನೀಡಿದ್ದ ರೆಡ್ಡಿ ಸ್ಕೈ ವಾಕರ್ ನಿರ್ಮಾಣದ ಭರವಸೆ ನೀಡಿದರು. 
 
ಇನ್ನು ಪ್ರತಿಭಟನೆಯು ಬೆಳಗಿನಿಂದ ಮಧ್ಯಾಹ್ನ 1 ಗಂಟೆ ವರೆಗೆ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಸ್ತವ್ಯಸ್ತವಾಗಿತ್ತು. ವಿದ್ಯಾರ್ಥಿಗಳು ಬೆಂಗಳೂರು-ದೇವನಹಳ್ಳಿ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದರು. 

ವೆಬ್ದುನಿಯಾವನ್ನು ಓದಿ