ಪಿಯು ಪೇಪರ್ ಸೋರಿಕೆ: ಬೆಚ್ಚಿ ಬೀಳಿಸುವ ಸಂಗತಿಗಳು

ಬುಧವಾರ, 6 ಏಪ್ರಿಲ್ 2016 (08:39 IST)
ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಲೀಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಲಾಗಿದ್ದು ಪ್ರಕರಣದ ಪ್ರಮುಖ ಆರೋಪಿ ಎಂದು ಭಾವಿಸಲಾಗಿರುವ ನಿವೃತ್ತ ಉಪನ್ಯಾಸಕ ಶಿವಕುಮಾರ್ ಸ್ವಾಮಿ  ಕೇರಳಕ್ಕೆ ಪರಾರಿಯಾಗಿದ್ದಾನೆಂದು ಅನುಮಾನ ವ್ಯಕ್ತವಾಗಿದೆ. ಸಿಐಡಿ ಪೊಲೀಸರು ಫೋನ್ ಕರೆ ಪರಿಶೀಲನೆ ಮಾಡಿದಾಗ ಈ ಮಾಹಿತಿ ಸಿಕ್ಕಿದ್ದು ಪೊಲೀಸರ ಎರಡು ತಂಡ ಕೇರಳಕ್ಕೆ ದೌಡಾಯಿಸಿದೆ.
 
ಕಿಂಗ್ ಪಿನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು ಐಪಿಎಸ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಉನ್ನತಾಧಿಕಾರಿಗಳು ಈ ಹಗರಣದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. 
 
ಈತನನ್ನು ಬಂಧಿಸಿದರೆ ಮತ್ತಷ್ಟು ಆರೋಪಿಗಳು ಬಂಧನಕ್ಕೊಳಪಡುವ ಸಾಧ್ಯತೆ ಇದ್ದು ಆರೋಪಿ ಶಿವಕುಮಾರ್ ಮೇಲೆ ನಗರದಲ್ಲಿ 10ಕ್ಕೆ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ಕಳೆದ 10 ವರ್ಷಗಳಿಂದ ಪ್ರಶ್ನೆಪತ್ರಿಕೆ ಸೋರಿಕೆಯೇ ಈತನ ಮುಖ್ಯ ದಂಧೆಯಾಗಿತ್ತು ಎಂದು ಸಿಐಡಿ ಮೂಲಗಳು ತಿಳಿಸಿವೆ.
 
ಟಿಇಟಿ, ಪಿಯುಸಿ, ಎಸ್ಎಸ್ಎಲ್‌ಸಿ ಸೇರಿದಂತೆ ಹಲವು ಕೆಪಿಎಸ್‍ಸಿ ಪರೀಕ್ಷೆಗಳ ಪೇಪರ್ ಲೀಕ್ ಮಾಡಿದ್ದ ಆರೋಪ ಶಿವಕುಮಾರ್ ಮೇಲಿದೆ. ಈ ಹಿಂದೆ ಈತನ ಬಂಧನ ಕೂಡ ಆಗಿತ್ತು. ಇದಲ್ಲದೇ ರಾಜಕಾರಣಿಯೊಬ್ಬರು ಸಹ ಪಿಯು ಪ್ರಶ್ನೆ ಪತ್ರಿಕೆಯನ್ನು ಖರೀದಿಸಿದ್ದರು ಎಂಬ ಸ್ಪೋಟಕ ಮಾಹಿತಿ ಸಿಐಡಿ ಮೂಲಗಳಿಂದ ಕೇಳಿಬರುತ್ತಿದೆ.
 
ಪ್ರತಿಯೊಂದು ಜಿಲ್ಲೆಯಲ್ಲಿ ಕಮಿಶನ್ ಆಧಾರದ ಮೇಲೆ ಏಜೆಂಟ್‌ರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಶಿವಕುಮಾರ್ ಹಲವಾರು ಬಾರಿ ಜೈಲಿಗೆ ಕೂಡಾ ಹೋಗಿ ಬಂದಿದ್ದಾನೆ ಎನ್ನಲ್ಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ