ನೆಚ್ಚಿನ ನಾಯಕ ಕಲಾಂಗೆ ರಾಜ್ಯದ ಹಲವೆಡೆ ಶ್ರದ್ಧಾಂಜಲಿ

ಮಂಗಳವಾರ, 28 ಜುಲೈ 2015 (12:20 IST)
ಪಾಠ ಮಾಡುತ್ತಲೇ ಕೊನೆಯುಸಿರೆಳೆದಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪುರಸ್ಕೃತ, ಖ್ಯಾತ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಅಸುನೀಗಿದ್ದ ಹಿನ್ನೆಲೆಯಲ್ಲಿ ರಾಜ್ಯದ ಶಿವಮೊಗ್ಗ, ದಾವಣೆಗೆರೆ, ಯಾದಗಿರಿ ಹಾಗೂ ಧಾರವಾಡ ಸೇರಿದಂತೆ ಇತರೆಡೆ ಸಾರ್ವಜನಿಕರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 
 
ಹೌದು, ದೇಶದ ಮಕ್ಕಳ ಮುದ್ದಿನ ತಾತ, ಪ್ರತಿಷ್ಠಿತ, ಅಪರಿಮಿತ, ಅಸಮಾನ್ಯ ವಿಜ್ಞಾನಿ, ಉತ್ತಮ ಜನನಾಯಕ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ನಿನ್ನೆ ಮೆಘಾಲಯದ ಶಿಲ್ಲಾಂಗ್‌ನ ಐಐಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದ ಕಲಾಂ ನಿನ್ನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಅವರನ್ನು ವಿವಿಧ ರೀತಿಯಾಗಿ ಸ್ಮರಿಸಿಕೊಳ್ಳುವ ಮೂಲಕ ನಮನ ಸಲ್ಲಿಸಲಾಗುತ್ತಿದೆ.  
 
ಶಿವಮೊಗ್ಗ ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳು ಶ್ವೇತ ವಸ್ತ್ರ ಧರಿಸಿ ಅವರ ಭಾವಚಿತ್ರಕ್ಕೆ ಹಾರವನ್ನು ಹಾಕಿ ನಮನ ಸಲ್ಲಿಸಿದರು. ಅಂತೆಯೇ ದಾವಣಗೆರೆಯಲ್ಲಿಯೂ ಕೂಡ ರಾಜ್ಯದ ವಿವಿಧ ಸಂಘಟನೆಗಳ ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 
 
ಇನ್ನು ಯಾದಗಿರಿಯಲ್ಲಿಯೂ ಕೂಡ ಸಾರ್ವಜನಿಕರು ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಿದರೆ, ಇನ್ನು ಧಾರವಾಡದಲ್ಲಿ ಕಲಾವಿದರೋರ್ವರು ಅವರ ಭಾವಚಿತ್ರವನ್ನು ಹೋಲುವ ಮಣ್ಣಿನ ಕಲಾಕೃತಿ ರಚಿಸಿ ಶ್ರದ್ಧಾಂಜಲಿ ಸಲ್ಲಿಸಿದರು. 

ವೆಬ್ದುನಿಯಾವನ್ನು ಓದಿ