ತಹಶಿಲ್ದಾರ್ ಕಚೇರಿಕೆ ಸಾರ್ವಜನಿಕರ ಮುತ್ತಿಗೆ: ಪ್ರತಿಭಟನೆ

ಸೋಮವಾರ, 4 ಮೇ 2015 (16:12 IST)
ಸಾರ್ವಜನಿಕರ ಪ್ಲಾಂಟೇಶನ್‌ ಜಾಗವನ್ನು ಅರಣ್ಯ ಇಲಾಖೆಗೆ ನೀಡಬಾರದೆಂದು ಒತ್ತಾಯಿಸಿ ನಗರದ ಕಾಡುಗೋಡಿಯ ನಿವಾಸಿಗಳು ಜಿಲ್ಲೆಯ ಪೂರ್ವ ವಿಭಾಗದ ತಹಶೀಲ್ದಾರ್ ಅವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸರ್ಕಾರ ತಮ್ಮ ಒಕ್ಕೊರಲಿನ ಧ್ವನಿಗೆ ಸ್ಪಂಧಿಸುತ್ತಿಲ್ಲ ಎಂದಾದರೆ ಸರ್ಕಾರ ನೀಡಿರುವ ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಐಡಿಗಳು ಏಕೆ ಬೇಕು ಎನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಗುರುತಿನ ಚೀಟಿಗಳನ್ನು ಕಚೇರಿಯ ಎದುರು ಎಸೆದು ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಸರ್ಕಾರವು ವ್ಯವಸಾಯಕ್ಕೆ ಯೋಗ್ಯವಾದ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಮುಂದಾಗಿದೆ. ಈ ಮೂಲಕ ರೈತರನ್ನು, ಬಡವರನ್ನು ಒಕ್ಕಲೆಬ್ಬಿಸಲು ಯತ್ನಿಸಿದೆ. ಸರ್ಕಾರದ ಈ ಕ್ರಮ ಸರಿಯಲ್ಲ, ಇದನ್ನು ಮೊದಲು ನಿಲ್ಲಿಸಬೇಕು. ರೈತರ ಭೂಮಿಯನ್ನು ರೈತರಿಗೇ ನೀಡಲಿ. ಅಲ್ಲದೆ ಅನುಭೋಗಿಸುತ್ತಿರುವ ಆಸ್ತಿಯನ್ನು ಶೀಘ್ರವೇ ರೈತರಿಗೇ ಸಾಗುವಳಿ ಮಾಡಿಕೊಡಲಿ ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ತಹಶಿಲ್ದಾರ್ ಹರೀಶ್ ನಾಯಕ್, ಸರ್ಕಾರದ ದಾಖಲೆಗಳು, ನಿಯಮಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಆದರೆ ಈ ಬಗ್ಗೆ ಸಾರ್ವಜನಿಕರು ತಮ್ಮ ಬಳಿಯೂ ದಾಖಲೆಗಳಿದ್ದು, ಹೈಕೋರ್ಟ್‌ನಲ್ಲಿಯೂ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಭೂಮಿಯನ್ನು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಅವರ ಬಳಿ ಇರುವ ದಾಖಲೆಗಳನ್ನು ನೀಡಿದಲ್ಲಿ ಮತ್ತೊಮ್ಮೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ಇದೇ ವೇಳೆ, ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ಕರೆದಿದ್ದು, ಅಂದು ಈ ಬಗ್ಗೆ ಚರ್ಚಿಸಲಾಗುತ್ತದೆ. ಆದ್ದರಿಂದ ಅಂದು ಸಾರ್ವಜನಿಕರಿಗೂ ಕೂಡ ಸಭೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಸಭೆ ಮುಗಿಯುವವರೆಗೆ ತೆರವು ಕಾರ್ಯಕ್ಕೆ ಮುಂದಾಗಿಲ್ಲ ಎಂದರು.  

ಪ್ರಕರಣವೇನು ?
ಇಲ್ಲಿನ ಕೆರೆಗೆ ಸೇರಿದ ಜಾಗವಿದ್ದು, ಅದನ್ನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡು ಅನುಬೋಗಿಸುತ್ತಿದ್ದಾರೆ. ಒಟ್ಟು 710 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 40 ಎಕರೆ ಜಾಗದಲ್ಲಿ ಊರು ನಿರ್ಮಾಣವಾಗಿದೆ. ಉಳಿದ ಭೂಮಿಯಲ್ಲಿ ವ್ಯವಸಾಯ ಮಾಡಲಾಗುತ್ತಿದೆ. ಪ್ರಸ್ತುತ ಸರ್ಕಾರವು ಈ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಆದ್ದರಿಂದ ಈ ಭಾಗದ ಸಾರ್ವಜನಿಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ