ರೈತರ ಆತ್ಮಹತ್ಯೆ ಹಿನ್ನೆಲೆ ಸಚಿವರ ಕಾರು ತಡೆದು ಘೇರಾವ್

ಶನಿವಾರ, 25 ಜುಲೈ 2015 (11:45 IST)
ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮೃತ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲು ಜಿಲ್ಲೆಗೆ ಆಗಮಿಸಿದ್ದ ರಾಜ್ಯದ ಒಳನಾಡು ಸಾರಿಗೆ ಸಚಿವ ಹೆಚ್.ಸಿ.ಮಹಾದೇವಪ್ಪ ಅವರ ಕಾರನ್ನು ಸಾರ್ವಜನಿಕರು ಅಡ್ಡಗಟ್ಟಿ ಘೇರಾವ್ ಹಾಕಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ನಗರದಲ್ಲಿ ನಡೆದಿದೆ. 
 
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದ್ದು, ಸಚಿವರು ಹಾಗೂ ಶಾಸಕರು ತಮ್ಮ ತಮ್ಮ  ಕ್ಷೇತ್ರಗಳಿಗೆ ತೆರಳಿ ಮೃತ ರೈತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಹೋದ್ಯೋಗಿ ಸಚಿವರಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಸಚಿವ ಮಹಾದೇವಪ್ಪ ಅವರು ತಾವು ಉಸ್ತುವಾರಿ ವಹಿಸಿರುವ ಜಿಲ್ಲೆಯಾದ ಹಾಸನಕ್ಕೆ ಭೇಟಿ ನೀಡಿ ಮೃತ ರೈತ ಕುಟುಂಬಗಳಿಗೆ ಸಾಂತ್ವನ ಹೇಳಲು ಮುಂದಾಗಿದ್ದರು. ಆದರೆ ಸಚಿವರು ಆಗಮಿಸುತ್ತಿದ್ದಂತೆಯೇ ಅವರ ಕಾರನ್ನು ಅಡ್ಡಗಟ್ಟಿ ಘೇರಾವ್ ಹಾಕಲು ಮುಂದಾದ ಸಾರ್ವಜನಿಕರು, ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 
 
ಇನ್ನು ಇಲ್ಲಿನ ಪ್ರವಾಸಿ ಮಂದಿರದ ಬಳಿ ಈ ಘಟನೆ ನಡೆದಿದ್ದು, ಸಾರ್ವಜನಿಕರು ಸಚಿವರ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ನಡೆಸುತ್ತಿದ್ದಾರೆ. ಅಲ್ಲದೆ ಮೃತ ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸುವಂತೆ ಒತ್ತಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಸಾಲಬಾಧೆ ತಾಳಲಾರದೆ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ