ಕೆರೆ ಒತ್ತುವರಿ ತೆರವು ಪರಿಶೀಲನೆ ವೇಳೆ ವಾಗ್ವಾದಕ್ಕಿಳಿದ ಸ್ಥಳೀಯರು

ಮಂಗಳವಾರ, 19 ಮೇ 2015 (14:30 IST)
ಕೆರೆ ಒತ್ತುವರಿ ತೆರವು ಸಂಬಂಧ ಸರ್ಕಾರ ರಚಿಸಿರುವ ಸಮಿತಿ ಸದಸ್ಯರು ಕೆರೆ ಪರಿಶೀಲನೆಗೆಂದು ನಗರದ ಜೆ.ಪಿ.ನಗರದ ಬಳಿ ಇರುವ ಸಾರಕ್ಕಿ ಕೆರೆಗೆ ಇಂದು ತೆರಳಿದ್ದ ವೇಳೆ ಇಲ್ಲಿನ ನಿವಾಸಿಗಳು ಸದಸ್ಯರೊಂದಿಗೆ ತೀವ್ರ ವಾಗ್ದಾಳಿ ನಡೆಸುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಪರೀಶೀಲನಾ ವೇಳೆ ಸದಸ್ಯರೊಂದಿಗೆ ವಾಗ್ವಾದಕ್ಕಿಳಿದ ಸ್ಥಳೀಯರು, ಸರ್ಕಾರವು ಕೆರೆ ಒತ್ತುವರಿ ವಿಚಾರದಲ್ಲಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದು, ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಇಡುತ್ತಿದೆ. ಈ ವಿಚಾರದಲ್ಲಿ ಸರಿಯಾದ ಸಮೀಕ್ಷೆ ಆಗಿಲ್ಲ. ಅಲ್ಲದೆ ಒತ್ತುವರಿ ಮಾಡಲಾಗಿದೆ ಎಂದು ನಮ್ಮನ್ನು ಬಲಿಪಶು ಮಾಡಿದ್ದು, ಅಧಿಕೃತವಾಗಿ ಕಟ್ಟಿರುವ ಅಕ್ರಮವಲ್ಲದ ಮನೆಗಳನ್ನೂ ಒಡೆಯಲಾಗಿದೆ. ಇನ್ನು ಅಕ್ರಮವಾಗಿ ನಿರ್ಮಿಸಿಕೊಂಡಿರುವ ಶ್ರೀಮಂತರ ಮನೆಗಳನ್ನು ಮಾತ್ರ ಇನ್ನೂ ತೆರವು ಮಾಡಲಾಗಿಲ್ಲ. ಸರ್ಕಾರದ ಈ ನಡೆ ಎಷ್ಟು ಸರಿ ಎಂದು ಸಾರ್ವಜನಿಕರು ಸದಸ್ಯರನ್ನು ಪ್ರಶ್ನಿಸಿದ್ದಾರೆ. 
 
ಇದಕ್ಕೆ ಉತ್ತರಿಸಿದ ಸಮಿತಿ ಸದಸ್ಯರು, ಒಂದು ವೇಳೆ ತಮಗೆ ಅನ್ಯಾಯವಾಗಿದೆ ಎಂದಾದರೆ ಸರ್ಕಾರ ತಮಗೆ ಮತ್ತೆ ಪುನರ್ವಸತಿ ವ್ಯವಸ್ಥೆ ಮಾಡಿಕೊಡಲಿದೆ. ಆದರೆ ಸ್ಥಳೀಯರ ಆಕ್ರೋಶ ಹಿನ್ನೆಲೆಯಲ್ಲಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಎಷ್ಟೇ ಶ್ರೀಮಂತರಾದರೂ ಕೂಡ ಕಾನೂನಿನ ಮುಂದೆ ಸಲ್ಲರು ಎಂದು ಸಮಾಧಾನ ಪಡಿಸಿದರು. 
 
ಸರ್ಕಾರ ಶಾಸಕ ಕೆ.ಬಿ.ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿದ್ದು, ಸರ್ವ ಪಕ್ಷಗಳ ಸದಸ್ಯರೂ ಸಮಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅಧ್ಯಕ್ಷರೂ ಸೇರಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಶಾಸಕರಾದ ಸುರೇಶ್ ಕುಮಾರ್, ಗೋವಿಂದರಾಜು ಹಾಗೂ ಬಿಡಿಎ ಆಯುಕ್ತ ಶ್ಯಾಮ್ ಭಟ್ ಸೇರಿದಂತೆ ಉನ್ನತಾಧಿಕಾರಿಗಳ ತಂಡ ಕೆರೆ ಪರಿಶೀಲನೆಯಲ್ಲಿ ತೊಡಗಿದೆ.
 
ಇದಕ್ಕೂ ಮುನ್ನ ಅಮಾನಿ ಕೆರೆ, ಯಡಿಯೂರು ಕೆರೆ, ಲಿಂಗಣ್ಣನ ಕೆರೆ, ಬಾಣಸವಾಡಿ ಕೆರೆ ಹೀಗೆ ಹಲವು ಕೆರೆಗಳನ್ನು ಪರಿಶೀಲಿಸಿದ್ದರು. 

ವೆಬ್ದುನಿಯಾವನ್ನು ಓದಿ