ನಾಲ್ಕನೇ ದಿನಕ್ಕೆ ಕಾಲಿಟ್ಟ ಪಿಯು ವಿದ್ಯಾರ್ಥಿಗಳ ಮುಷ್ಕರ

ಶುಕ್ರವಾರ, 22 ಮೇ 2015 (11:35 IST)
2015ನೇ ಸಾಲಿನ ಪಿಯು ಫಲಿತಾಂಶದಲ್ಲಿ ಹಲವು ತೊಂದರೆಗಳುಂಟಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪರೀಕ್ಷಾ ಮಂಡಳಿ ವಿರುದ್ಧ ಕೈಗೊಂಡಿದ್ದ ಪ್ರತಿಭಟನೆಯು ಇಂದೂ ಮುಂದುವರಿದಿದ್ದು, ಮಂಡಳಿಯ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ.  
 
ನಗರದ ಮಲ್ಲೇಶ್ವರಂ ಕಚೇರಿ ಮುಂದೆ ನಡೆಯುತ್ತಿರುವ ಈ ಪ್ರತಿಭಟನೆಯು ಪ್ರಸ್ತುತ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗುವ ಮೂಲಕ ಹಂಗಾಮ ಸೃಷ್ಟಿಸಿದ್ದು, ಪ್ರತಿಭಟನೆಯಲ್ಲಿ ಎಬಿವಿಪಿ ಸೇರಿದಂತೆ ಪೋಷಕರ ಹಲವು ಸಂಘಟನೆಗಳು ಕೈ ಜೋಡಿಸಿವೆ. ಪ್ರತಿಭಟನೆಯಲ್ಲಿ ಮಂಡಳಿಯ ವಿರುದ್ಧ ಧಿಕ್ಕಾರ ಕೂಗುತ್ತಿದ್ದು, ನಮಗೆ ನ್ಯಾಯ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೇ ವೇಳೆ, ಮಂಡಳಿಯ ನಿರ್ದೇಶಕಿ ಸುಷ್ಮಾ ಗೋಡಬಲೆ ಅವರ ವಿರುದ್ಧ ಸಮರ ಸಾರಿದ್ದು, 'ಗೋಡಬಲೆ ನೀ ಮಾಡಬೇಡ ವಿದ್ಯಾರ್ಥಿಗಳ ಕಗ್ಗೋಲೆ' ಎಂಬ ಘೋಷವಾಕ್ಯದ ಬಿತ್ತಿಪತ್ರ ಎಲ್ಲರ ಗಮನ ಸೆಳೆಯುತ್ತಿತ್ತು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಸರ್ಕಾರವು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಎಂದಷ್ಟೇ ಪ್ರತಿಕ್ರಿಯಿಸುತ್ತಿದ್ದು, ಹಣವನ್ನು ಹೊಡೆಯಲು ಸಂಚು ರೂಪಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಸಮಸ್ಯೆ ಏನು ಎಂದು ಅವರು ಆಲಿಸುತ್ತಿಲ್ಲ.  ಅಲ್ಲದೆ ತಪ್ಪಾಗಿರುವುದು ಮಂಡಳಿಯಿಂದ ಅದಕ್ಕೆ ನಾವು ಜವಾಬ್ದಾರರೇ ಎಂದು ಪ್ರಶ್ನಿಸುತ್ತಿದ್ದು, ಮಂಡಳಿಯ ನಿರ್ದೇಶಕರೂ ಸೇರಿದಂತೆ ಸ್ಥಳಕ್ಕೆ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಬರಲಿ ಎಂದು ಪಟ್ಟು ಹಿಡಿದಿದ್ದಾರೆ. ಹಲವು ಕಾಲೇಜುಗಳಲ್ಲಿ ಈಗಾಗಲೇ ದಾಖಲಾತಿ ಆರಂಭವಾಗಿದ್ದು, ದಾಖಲಾತಿ ಹಾಗೂ ಸಿಇಟಿ ಫಲಿತಾಂಶ ಪ್ರಕಟಣೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.  
 
ಇದೇ ವೇಳೆ, ಸರ್ಕಾರ ಈ ವಿಷಯದಲ್ಲಿ ಬೇಜವಾಬ್ದಾರಿ ತೋರುತ್ತಿದ್ದು, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 
 
ಇನ್ನು ಪ್ರತಿಭಟನೆ ಹಿನ್ನೆಲೆಯಲ್ಲಿ 300ಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸ್ಥಳಕ್ಕೆ ಉತ್ತರ ವಲಯ ಡಿಸಿಪಿ ಸುರೇಶ್ ಕುಮಾರ್ ಅವರು ಭೇಟಿ ನೀಡಿ ಭದ್ರತೆಯ ಬಗ್ಗೆ ಪರಿಶೀಲಿಸಿದರು. 
 
ಪ್ರತಿಭಟನೆಗೆ ಕಾರಣವೇನು?
ಪಿಯುಸಿ ಫಲಿತಾಂಶವು ಕಳೆದ ಮೇ 18ರಂದು ಪ್ರಕಟವಾಗಿದ್ದು, ಸರ್ಕಾರವೇ 3 ವೆಬ್‌ಸೈಟ್‌ಗಳನ್ನು ಬಿಡುಗಡೆ ಗೊಳಿಸಿತ್ತು. ಆದರೆ ಒಂದೊಂದು ವೆಬ್‌ಸೈಟ್‌ಗಳಲ್ಲಿ ಒಂದೊಂದು ತೆರನಾದ ಫಲಿತಾಂಶ ಪ್ರದರ್ಶನವಾಗುತ್ತಿದೆ. ಉದಾಹರಣೆಗೆ ಒಂದರಲ್ಲಿ ಒಂದು ತೆರನಾದ ಅಂಕಗಳಿದ್ದರೆ, ಮತ್ತೊಂದರಲ್ಲಿ ಮತ್ತೊಂದು ತೆರನಾದ ಅಂಕ ಪ್ರದರ್ಶನವಾಗುತ್ತಿದೆ. ಅಂತೆಯೇ ಒಂದರಲ್ಲಿ ಕಡಿಮೆ ಅಂಕ ತೋರುತ್ತಿದೆ ಎಂದು ಆತಂಕಕ್ಕೀಡಾಗಿರುವಾಗಲೇ ಮತ್ತೊಂದರಲ್ಲಿ ಪರೀಕ್ಷೆಗೆ ಗೈರು ಹಾಜರು ಎಂದು ತೋರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೀಡಾಗಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ಯಾವುದೇ ಅಧಿಕಾರಿಗಳು ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡದೇ ತಮ್ಮ ಕುರುಡುತನ ಪ್ರದರ್ಶಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ