ಪ್ರಶ್ನೆಪತ್ರಿಕೆ ಸೋರಿಕೆ: ಕೊನೆಗೂ ಸೆರೆ ಸಿಕ್ಕಿದ ಶಿವಕುಮಾರ್

ಮಂಗಳವಾರ, 3 ಮೇ 2016 (13:39 IST)
ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನ ಜತೆ ಮತ್ತೆ ಮೂವರು ಸಹ ಬಂಧನಕ್ಕೊಳಪಟ್ಟಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಆರೋಪಿಗಳನ್ನು ಬಂಧಿಸಿದಂತಾಗಿದೆ. 

ನಂದಿನಿ ಲೇ ಔಟ್ ನಿವಾಸಿಯಾಗಿದ್ದ ಶಿವಕುಮಾರ್ ಮನೆಗೆ ಬೀಗ ಹಾಕಿ ಮಾರ್ಚ್ 31 ರಿಂದ ತಲೆ ಮರೆಸಿಕೊಂಡಿದ್ದ. ಬನ್ನೇರುಘಟ್ಟ ರಸ್ತೆಯ ಗಾರೆಬಾವಿ ಪಾಳ್ಯದ ಪಾಳು ಮನೆಯೊಂದರಲ್ಲಿ ಅವಿತುಕೊಂಡಿದ್ದ ಶಿವಕುಮಾರ್ ಸ್ವಾಮಿ ಜೊತೆ ಮೂವರು ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಸೋಮವಾರ ರಾತ್ರಿ 10.30ರ ವೇಳೆಗೆ ಬಂಧಿಸಿದ್ದಾರೆ. ಎಸ್‌ಪಿ ಸಿರಿಗೌರಿ ಹಾಗೂ 40 ಸಿಬ್ಬಂದಿ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
 
ಆತನ ಜತೆಗಿದ್ದ ಇತರ ಆರೋಪಿಗಳಾದ ಕುಮಾರ್, ಗೌಡ ಮತ್ತು ಶಿವಕುಮಾರ್ ಸಹ ಈಗ ಪೊಲೀಸರ ವಶದಲ್ಲಿದ್ದಾರೆ. ಶಿವಕುಮಾರನ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ
 
ಸಿಐಡಿ ಡಿಜಿಪಿ ಕಿಶೋರ್‌ಚಂದ್ರ ಅವರು ಪತ್ರಿಕಾಗೋಷ್ಠಿ ನಡೆಸಿ ಕಿಂಗ್‌ಪಿನ್ ಬಂಧನವಾಗಿರುವುದನ್ನು ಸ್ಪಷ್ಟ ಪಡಿಸಿದ್ದಾರೆ. 
 
ಶಿವಕುಮಾರ ಸ್ವಾಮಿ ಅಲಿಯಾಸ್ ಶಿವಕುಮಾರಯ್ಯ ಅಲಿಯಾಸ್ ಗುರೂಜಿ (66) ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಾಗೇರಿ ಗ್ರಾಮದವರಾಗಿದ್ದು ಕೆಲ ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ್ದ. ಬಳಿಕ ಸ್ವಯಂ ನಿವೃತ್ತಿ ತೆಗೆದುಕೊಂಡು ಪ್ರಶ್ನೆ ಪತ್ರಿಕೆ ಸೋರಿಕೆಯನ್ನೇ ದಂಧೆಯನ್ನಾಗಿಸಿಕೊಂಡಿದ್ದ. ಚಾಣಾಕ್ಷನಾಗಿದ್ದ ಶಿವಕುಮಾರ್ 2008ರಿಂದ ಈ ಅಕ್ರಮವನ್ನು ನಡೆಸಿಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.
 
 

ವೆಬ್ದುನಿಯಾವನ್ನು ಓದಿ