ರಾಹುಲ್ ಗಾಂಧಿಗೆ ಪ್ರಬುದ್ಧತೆಯೇ ಇಲ್ಲ: ಎಸ್ ಎಂ ಕೃಷ್ಣ

ಶುಕ್ರವಾರ, 24 ಮಾರ್ಚ್ 2017 (09:12 IST)
ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮೇಲೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕೃಷ್ಣ ಅವರೊಬ್ಬ ಅಪ್ರಬುದ್ಧ ರಾಜಕಾರಣಿ ಎಂದಿದ್ದಾರೆ.

 

ರಾಹುಲ್ ರದ್ದು ಹಿಟ್ ಆಂಡ್ ರನ್ ರಾಜಕಾರಣಿ. ಪಕ್ಷವನ್ನು ತಳಮಟ್ಟದಿಂದ ಬೆಳೆಸುವ ಆಸಕ್ತಿಯೇ ಇಲ್ಲ. ಅವರಲ್ಲಿ ಗಂಭೀರತೆಯೇ ಇಲ್ಲ. ರಾಹುಲ್ ಬಂದ ಮೇಲೆ ನನ್ನಂತಹ ರಾಜಕಾರಣಿಗಳನ್ನು ಕಡೆಗಣಿಸಲಾಯಿತು ಎಂದು ಕೃಷ್ಣ ಕಿಡಿ ಕಾರಿದ್ದಾರೆ.

 
ಆದರೆ ಸೋನಿಯಾ ಗಾಂಧಿ ಬಗ್ಗೆ ಈಗಲೂ ಗೌರವವಿರುವುದಾಗಿ ಹೇಳಿಕೊಂಡಿದ್ದಾರೆ. ಅವರಿಗೆ ಪಕ್ಷದ ಬಗ್ಗೆ ಪ್ರೀತಿಯಿದೆ. ಅವರಿಗೆ ಪಕ್ಷದ ಮೇಲಿರುವ ಒಲವು ಇನ್ಯಾರಿಗೂ ಇಲ್ಲ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದ್ದಕ್ಕೂ ರಾಹುಲ್ ಗಾಂಧಿಯ ತಲೆ ಬುಡವಿಲ್ಲದ ಯೋಜನೆಗಳೇ ಕಾರಣ ಎಂದೂ ಅವರು ದೂರಿದ್ದಾರೆ.

 
ಇದೇ ವೇಳೆ ಬಿಜೆಪಿಯ ಹಿಂದುತ್ವ ತತ್ವ ಮತ್ತು ಪ್ರಧಾನಿ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿಕೊಂಡು ಬಿಜೆಪಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ