ಮೃತ ರೈತ ಅಶೋಕ್ ಮನೆಗೆ ರಾಹುಲ್ ಭೇಟಿ: ಸಾಂತ್ವನ, 1 ಲಕ್ಷ ಪರಿಹಾರ

ಶನಿವಾರ, 10 ಅಕ್ಟೋಬರ್ 2015 (11:23 IST)
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರವಾಸದ ಎರಡನೇ ದಿನವಾದ ಇಂದು ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಮೈದೂರು ಗ್ರಾಮಕ್ಕೆ ಭೇಟಿ ಕೊಟ್ಟಿದ್ದು, ಮೃತ ರೈತ ಅಶೋಕ್ ಮಡಿವಾಳ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. 
 
ಗ್ರಾಮದ ಮೃತ ರೈತ ಅಶೋಕ್ ಮಡಿವಾಳ(47) ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ರಾಹುಲ್, ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ವತಿಯಿಂದ 1 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ಅಶೋಕ್ ಅವರ ಮಗ ಕಿರಣ್ ಅವರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದರು. 
 
ಬೆಳ್ಳಂ ಬೆಳಗ್ಗೆ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿ ಜಿಲ್ಲೆಯ ರಾಣಿಬೆನ್ನೂರಿನ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಸಚಿವರಾದ ವಿನಯ್ ಕುಮಾರ್ ಸೊರಕೆ, ಹೆಚ್.ಕೆ. ಪಾಟೀಲ್, ಎಸ್.ಆರ್.ಪಾಲೀಟ್ ಸೇರಿದಂತೆ ರಾಜ್ಯದ ಇತರೆ ನಾಯಕರು ಸ್ವಾಗತಿಸಿ ಸಾಥ್ ನೀಡಿದ್ದರು. 
 
ಇನ್ನು ಗ್ರಾಮಕ್ಕೆ ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಕಾಂಗ್ರೆಸ್‌ನ ಸ್ಥಳೀಯ ಕಾರ್ಯಕರ್ತರು ಗ್ರಾಮವನ್ನು ಫುಲ್ ಕ್ಲೀನ್ ಮಾಡಿ ಸ್ವಚ್ಛತೆ ಕಾಪಾಡಿದ್ದರು. ಪರಿಣಾಮ ಗ್ರಾಮವು ಅತಿ ಸ್ವಚ್ಛತೆಯಿಂದ ಕಣ್ಮನ ಸೆಳೆಯುತ್ತಿತ್ತು. 

ವೆಬ್ದುನಿಯಾವನ್ನು ಓದಿ