ರಾಜ್ಯಕ್ಕೆ ರಾಹುಲ್ ಭೇಟಿ: ಇಬ್ಬರು ಅನ್ನದಾತರು ಆತ್ಮಹತ್ಯೆಗೆ ಶರಣು

ಶುಕ್ರವಾರ, 9 ಅಕ್ಟೋಬರ್ 2015 (13:20 IST)
ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ರಾಜ್ಯಕ್ಕೆ ಭೇಟಿ ನೀಡಿರುವಾಗಲೇ ರಾಜ್ಯದಲ್ಲಿ ಇಂದು ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.  
 
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗ್ಗೇಪಲ್ಲಿ ತಾಲೂಕಿನ ಪುಲಕುಂಟ್ಲಪಲ್ಲಿ ಎಂಬ ಗ್ರಾಮದ ರೈತ ಎಸ್.ವೆಂಕಟರೆಡ್ಡಿ(47) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದಾನೆ. ಈತ ಕೊಳವೆ ಬಾವಿ ಕೊರೆಸಲೆಂದು ನಾಲ್ಕು ಲಕ್ಷ ಕೈ ಸಾ ಮಾಡಿಕೊಂಡಿದ್ದ. ಆದರೆ ನೀರಿಲ್ಲದೆ ಬೆಳೆ ನಾಶವಾಗಿದ್ದ ಕಾರಣ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಲಗಾರರಿಂದ ಸಾಲ ಮರುಪಾವತಿ ಮಾಡುವಂತೆ ಒತ್ತಡ ಹೆಚ್ಚುತ್ತಿತ್ತು. ಈ ಹಿನ್ನೆಲೆಯಲ್ಲಿ ಮನನೊಂದ ಆತ ಇಂದು ಬೆಳಗಿನ ಜಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ 10 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.  
 
ಇನ್ನು ಇಂದು ಮಂಡ್ಯ ಜಿಲ್ಲೆಯಲ್ಲಿಯೂ ಕೂಡ ಓರ್ವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು, ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ನಾಯಸಿಂಗನಹಳ್ಳಿ ಗ್ರಾಮದ ಮಹಾದೇವಯ್ಯ(60) ಎಂಬ ರೈತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಮೂರು ಎಕರೆ ಜಮೀನಿದ್ದು, ಕಬ್ಬು ಮತ್ತು ಭತ್ತ ಬೆಳೆಯುತ್ತಿದ್ದ. ಅಲ್ಲದೆ ಬೆಳೆಗಾಗಿ ನಾಲ್ಕು ಲಕ್ಷ ಸಾಲ ಮಾಡಿಕೊಂಡಿದ್ದ. ಆದರೆ ಸಾಲ ತೀರಿಸಲಾಗದೆ ಮನನೊಂದು ಇಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ 60 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ವೆಬ್ದುನಿಯಾವನ್ನು ಓದಿ