ಶಾಖೋತ್ಪನ್ನ ವಿದ್ಯುತ್ : ಜಮೀನು ಕಳೆದುಕೊಂಡವರಿಗೆ ಉಡುಪಿ ಮಾದರಿ ಪ್ಯಾಕೇಜ್

ಬುಧವಾರ, 30 ನವೆಂಬರ್ 2016 (12:39 IST)
ರಾಯಚೂರಿನ ಆರ್.ಟಿ.ಪಿ.ಎಸ್. ಮತ್ತು ವೈ.ಟಿ.ಪಿ.ಎಸ್. ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಜಮೀನು ನೀಡಿದ ರೈತರಿಗೆ ಉಡುಪಿ ಮಾದರಿಯಲ್ಲಿ ಪ್ಯಾಕೇಜ್ ರೂಪಿಸಿ ಪರಿಹಾರ ಒದಗಿಸಲಾಗವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
 
ವಿಧಾನ ಪರಿಷತ್ತಿನಲ್ಲಿ ಶಾಸಕ ಎನ್.ಎಸ್. ಬೋಸ್‍ರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಮಾಹಿತಿ ನೀಡಿದರು. ರಾಯಚೂರು ಶಾಖೋತ್ಪನ್ನ ಕೇಂದ್ರದ ಯೋಜನೆಗಾಗಿ 3145 ಎಕರೆ ಭೂಮಿಯನ್ನು ವಶಪಡಿಸಿಕೊಂಡು 9.42 ಕೋಟಿ.ರೂ.ಗಳ ಪರಿಹಾರ ಪಾವತಿಸಲಾಗಿದೆ. ಹಾಗೂ ವೈ.ಟಿ.ಪಿ.ಎಸ್. ಯೋಜನೆಗೆ 1126 ಎಕರೆ 39 ಗುಂಟೆ ಭೂಮಿಯನ್ನು ತೆಗೆದುಕೊಂಡು 81.72 ಕೋಟಿ ರೂ.ಗಳ ಹಣ ಕೆ.ಐ.ಎ.ಡಿ.ಬಿ. ಗೆ ಪಾವತಿಸಲಾಗಿದೆ. 
 
ಜಮೀನು ಕಳೆದುಕೊಂಡವರಿಗೆ ಆರ್.ಟಿ.ಪಿ.ಎಸ್. ನಲ್ಲಿ ಉದ್ಯೋಗ ನೀಡಲಾಗಿದೆ. ಆದರೆ ವೈ.ಟಿ.ಪಿ.ಎಸ್. ಯೋಜನೆಗೆ ನೇರವಾಗಿ ರೈತರಿಂದ ಭೂಮಿ ಪಡೆದಿಲ್ಲ. ಕೆ.ಐ.ಎ.ಡಿ.ಬಿ. ಮುಖಾಂತರ ಪಡೆಯಲಾಗಿದೆ. ಆದರೂ ಮಾನವೀಯತೆ ದೃಷ್ಟಿಯಿಂದ ಅರ್ಹ 80 ಜನರಿಗೆ ಉದ್ಯೋಗ ನೀಡಲು ಈಗಾಗಲೇ ಆದೇಶವನ್ನು ವಿತರಿಸಲು ಸರ್ಕಾರ ಸಿದ್ಧವಾಗಿದೆ. ವಿದ್ಯುತ್ ಸ್ಥಾವರಗಳಿಂದ ಈ ಪ್ರದೇಶದಲ್ಲಿ ಉಷ್ಣಾಂಶ ಹೆಚ್ಚಾಗಿಲ್ಲ. ಸ್ಥಾವರದ ಸುತ್ತಮುತ್ತ ಯಥೇಚ್ಛವಾಗಿ ಹಸಿರುವ ಗಿಡ ಮರಗಳನ್ನು ಬೆಳೆಸಲಾಗಿದೆ.
 
ಕೇಂದ್ರ ಪರಿಸರ ಸಚಿವಾಲಯದ ಮಾರ್ಗಸೂಚಿಯಂತೆ 6 ಲಕ್ಷಕ್ಕಿಂತಲೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ಬೂದಿಮಿಶ್ರಿತ ಹಾಗೂ ತ್ಯಾಜ್ಯ ಚರಂಡಿ ನೀರು ವಿದ್ಯುತ್ ಕೇಂದ್ರದಿಂದ ಹೊರಗೆ ಹರಿದು ನದಿಯನ್ನು ಸೇರದಂತೆ ಝೀರೋ ಡಿಸ್ಚಾರ್ಜ್ ಕ್ರಮ ಅಳವಡಿಸಿಕೊಳ್ಳಲಾಗಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
 
ಸೌರನೀತಿ ದುರುಪಯೋಗ ಕಠಿಣ ಕ್ರಮ : ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಸಂಬಂಧ ಕಂಪನಿಗಳು ಮತ್ತು ಖಾಸಗಿ ವ್ಯಕ್ತಿಗಳೊಂದಿಗೆ ಒಟ್ಟು 5065 ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇಲ್ಲಿ ನಿಯಮ ಪಾಲಿಸದ 73 ಅಧಿಕಾರಿ ಮತ್ತು ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ ವಿಧಾನ ಪರಿಷತ್ತಿನಲ್ಲಿ ಶಾಸಕಿ ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.
 
ಸೌರನೀತಿಗೆ ಕೇಂದ್ರ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡಿದೆ. ಕಟ್ಟಡ ಇದ್ದವರಿಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಆದರೆ ಕಟ್ಟಡ ಇಲ್ಲದೆ ಇರುವವರು ಅರ್ಜಿ ಹಾಕಿದ್ದಾರೆ. ನಿಯಮಬಾಹಿರವಾಗಿ ಒಪ್ಪಂದಕ್ಕೆ ಮುಂದಾದ ಕಾರ್ಯನಿರ್ವಾಹಕ ಇಂಜೀನಿಯರ್‍ಗಳನ್ನು ಸೇರಿ ವಿವಿಧ ಹಂತಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿತ್ತು ಎಂದು ಸಚಿವರು ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ