ರೈಲ್ವೆ ಬಜೆಟ್ ವ್ಯವಹಾರಿಕವೇ ಹೊರತು ಸಾಮಾನ್ಯನ ಸೇವೆಗಲ್ಲ: ಉಗ್ರಪ್ಪ

ಗುರುವಾರ, 26 ಫೆಬ್ರವರಿ 2015 (14:11 IST)
ಇಂದಿನ ಕೇಂದ್ರ ಸರ್ಕಾರದ ರೈಲ್ವೆ ಬಜೆಟ್ ಮಂಡನೆ ಬಗ್ಗೆ ರಾಜ್ಯದ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ವಿ.ಎಸ್. ಉಗ್ರಪ್ಪ ಪ್ರತಿಕ್ರಿಯಿಸಿದ್ದು, ಬಜೆಟನ್ನು ಸಂಪೂರ್ಣವಾಗಿ ವ್ಯವಹಾರಿಕ ದೃಷ್ಟಿಯಿಂದ ಮಾಡಲಾಗಿದೆಯೇ ಹೊರತು, ಸಾಮಾನ್ಯನಿಗೆ ಉತ್ತಮ ಸೇವೆ ಒದಗಿಸುವ ಅಭಯ ಕೇಂದ್ರ ರೈಲ್ವೆ ಬಜೆಟ್ ನಲ್ಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸಾಲಿನ ರೈಲ್ವೆ ಬಜೆಟ್ ಸಂಪೂರ್ಣ ಕಳಂಕಿತವಾಗಿದ್ದು, ಸಂವಿಧಾನ ವಿರೋಧಿಯಾಗಿ ಸಚಿವರು ಬಜೆಟ್ ಮಂಡಿಸಿದ್ದಾರೆ. ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಯೋಜನೆಗಳನ್ನು ಘೋಷಿಸದೆ, ಕೇವಲ ನಗರಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಒಂದು ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ನಿಂದ ಸಾರ್ವಜನಿಕರಿಗೆ ಯಾವ ಲಾಭವೂ ಇಲ್ಲ. 
 
ಸಚಿವರು ಮುಂದಿನ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಖಾಸಗಿ ಸಹಭಾಗಿತ್ವಕ್ಕೆ ಆದ್ಯತೆ ನೀಡಿದ್ದಾರೆ. ಅಲ್ಲದೆ ಮೇಕ್ ಇನ್ ಇಂಡಿಯಾ ಎಂಬ ಹೆಸರಿನಲ್ಲಿ ಬಜೆಟ್ ಮಂಡಿಸಿದ್ದು, ಯಾವ ರಾಜ್ಯಕ್ಕೆ ಎಷ್ಟು ಲಾಭ ಎಂಬುದೂ ತಿಳಿಸದೆ ಗೌಪ್ಯವಾಗಿ ಮಂಡಿಸಲಾಗಿದೆ. ಇದು ಮುಚ್ಚಳಿಕೆ ಮುಚ್ಚಿದಂತೆ ಒಂದು ಆಯವ್ಯಯವಾಗಿದ್ದು, ಕೇಂದ್ರ ಸರ್ಕಾರ ಕೇವಲ ವ್ಯವಹಾರಕ್ಕಾಗಿ ಮಾಡಿದೆಯೇ ಹೊರತು ಸಾಮಾನ್ಯನ ಸೇವೆಗೆ ನರೇಂದ್ರ ಮೋದಿ ಸರ್ಕಾರದ ಬಜೆಟ್ ಯೋಗ್ಯವಲ್ಲ ಎನ್ನುವ ಮೂಲಕ ಸಾರಾಸಗಟಾಗಿ ತಳ್ಳಿ ಹಾಕಿದರು. 
 
ಬಜೆಟ್‌ನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಇಂದು ಸಂಸತ್ತಿನಲ್ಲಿ ಈ ರೈಲ್ವೆ ಆಯವ್ಯಯವನ್ನು ಮಂಡಿಸಿದ್ದು, ಸುಮಾರು 1 ಗಂಟೆ 10 ನಿಮಿಷ ಅವಧಿಯಲ್ಲಿ ಮಂಡಿಸಿ ಮುಕ್ತಾಯಗೊಳಿಸಿದರು. 
 
ಸಚಿವರ ಚೊಚ್ಚಲ ಬಜೆಟ್‌ನಲ್ಲಿ ರೈಲಿನಲ್ಲಿ ಮೊಬೈಲ್ ಚಾರ್ಜರ್ ಅಳವಡಿಕೆ, ಸುರಕ್ಷತೆಗಾಗಿ ಸಿಸಿಟಿವಿ ಅಳವಡಿಕೆ, ಆನ್ ಲೈನ್ ಮೂಲಕ ವ್ಹೀಲ್ ಚೇರ್ ಬುಕ್ಕಿಂಗೆ, ಆಹಾರ, ರೈಲಿನ ಸಂಚಾರ ವೇಳೆಯನ್ನು ಎಸ್ಎಂಎಸ್ ಮೂಲಕ ತಿಳಿಯುವುದು, ಆದರ್ಶ ನಿಲ್ದಾಣ ಯೋಜನೆ ಅಡಿಯಲ್ಲಿ 200 ನಿಲ್ದಾಣಗಳ ನಿರ್ಮಾಣ ಸೇರಿದಂತೆ ಇನ್ನಿತರೆ ಅಂಶಗಳಿವೆ.  

ವೆಬ್ದುನಿಯಾವನ್ನು ಓದಿ