ಉದ್ಯಾನ ನಗರಿಯಲ್ಲಿ ಕಚಗುಳಿ ಇಡುತ್ತಿರುವ ಮಹಾ ವರುಣ

ಮಂಗಳವಾರ, 3 ಮಾರ್ಚ್ 2015 (09:09 IST)
ಇಂದು ಬೆಳ್ಳಂಬೆಳಗ್ಗೆ ಉದ್ಯಾನ ನಗರಿಯಲ್ಲಿ ವರುಣನ ಆಗಮನವಾಗಿದ್ದು, ಜನಮನವನ್ನು ತಣಿಸುತ್ತಿದೆ. ನಗರದ ಹಲವೆಡೆ ಮಳೆ ಸುರಿಯುತ್ತಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. 
 
ಇನ್ನು ಈ ಬಗ್ಗೆ ಹವಾಮಾನ ಇಲಾಖೆಯ ರಾಜ್ಯ ನಿರ್ದೇಶಕ ಬಿ.ಪುಟ್ಟಣ್ಣ ಮಾತನಾಡಿದ್ದು, ಕನ್ಯಾಕುಮಾರಿಯಿಂದ ಮೇಲ್ಮೈ ಸುಳಿಗಾಳಿ ದಕ್ಷಿಣ ಒಳನಾಡಿನತ್ತ ಪ್ರವೇಶಿಸುತ್ತಿರುವ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ರಾಜಧಾನಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಬೀಳಲಿದೆ. ಅಲ್ಲದೆ ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿಯೂ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಿದ್ದಾರೆ.
 
ನಗರದ ರಿಚ್‌‌ಮಂಡ್ ಸರ್ಕಲ್, ಶಾಂತಿನಗರ, ಜ್ಞಾನ ಭಾರತಿ ಕ್ಯಾಂಪಸ್, ಕೆಂಗೇರಿ, ಮಲ್ಲೇಶ್ವರಂ ಸೇರಿದಂತೆ ಇತರೆಡೆ ವರುಣ ಧರೆಗಿಳಿಯುತ್ತಿದ್ದು, ಬನಶಂಕರಿ 3ನೇ ಹಂತ, ಜಯನಗರದಲ್ಲಿಯೂ ಕೂಡ ತಾಂಡವವಾಡುತ್ತಿದ್ದಾನೆ. ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಇಂದು ಇಡೀ ದಿನ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 
 
ಈ ವರಣನ ಆರ್ಭಟದಿಂದ ಬೆಳ್ಳಂಬೆಳಗ್ಗೆ ಕಚೇರಿಗೆ ಹೋಗುವವರಿಗೆ ತೊಂದರೆಯುಂಟಾಗುತ್ತಿದ್ದು, ಜರ್ಕಿನ್, ಛತ್ರಿಗೆ ಮೊರೆ ಹೋಗುವಂತೆ ಮಾಡಿದೆ. ಮಳೆ ಹಿನ್ನೆಲೆಯಲ್ಲಿ ಉದ್ಯಾನ ನಗರಿಯಲ್ಲಿ ಉಷ್ಣಾಂಶ ಏರಿಳಿತ ಕಾಣಲಿದೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ