ಕೊಂಚ ಸುಮ್ಮನಾದ ವರುಣ: ರಕ್ಷಣಾ ಕಾರ್ಯಚರಣೆ ಚುರುಕು

ಮಂಗಳವಾರ, 31 ಮಾರ್ಚ್ 2015 (09:27 IST)
ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ನಿನ್ನೆ ಇದ್ದಕ್ಕಿದ್ದಂತೆ ಕಡಿಮೆಯಾಗಿದ್ದು, ನೀರಿನ ಹರಿಯುವ ಮಟ್ಟ ಕೊಂಚ ಕುಸಿದಿದೆ. ಇದರಿಂದ ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. 
 
ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಝೇಲಂ ನದಿ ತುಂಬಿ ಹರಿದು ಪ್ರವಾಹ ಉಂಟಾಗಿತ್ತು. ಆದರೆ ಪ್ರಸ್ತುತ ವರುಣನ ಆರ್ಭಟ ಕಡಿಮೆಯಾಗಿದ್ದು, ನೀರಿನ ಹರಿಯುವ ಮಟ್ಟ ಸ್ವಲ್ಪ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ರಕ್ಷಣಾ ಪಡೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ವಿಪತ್ತು ನಿರ್ವಹಣಾ ಪಡೆಯ 8 ತಂಡಗಳು ಹಾಗೂ ವಾಯುಪಡೆ, ಭೂದಳದ ಸಿಬ್ಬಂದಿಗಳೂ ಕೂಡ ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ ರಕ್ಷಣಾ ಕಾರ್ಯಕ್ಕಾಗಿ ಕೇಂದ್ರವು ರಾಜ್ಯ ಸರ್ಕಾರಕ್ಕೆ ಈಗಾಗಲೇ 200 ಕೋಟಿ ಅನುಧಾನ ನೀಡಿದೆ. ಸಾರ್ವಜನಿಕರನ್ನು 
 
ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದ್ದು, ತಾತ್ಕಾಲಿಕ ಶಿಬಿರವನ್ನೂ ಏರ್ಪಡಿಸಲಾಗಿದೆ. ಅಲ್ಲಿ ಎಲ್ಲಾ ಸಾರ್ವಜನಿಕರಿಗೆ ಪುನರ್ವಸತಿಯನ್ನು ಕಲ್ಪಿಸಲಾಗಿದೆ. 
 
ಮಳೆಯ ಪರಿಣಾಮ ಹಲವು ತಗ್ಗು ಪ್ರದೇಶಗಳು ನೀರಿನಿಂದಾವೃತವಾಗಿದ್ದು, ನೀರಿನ ತೆರವು ಕಾರ್ಯ ನಡೆಯುತ್ತಿದೆ. ಅಲ್ಲದೆ ಅಧಿಕ ನೀರು ಸಂಗ್ರಹಣೆಯಾದ ಹಿನ್ನೆಲೆಯಲ್ಲಿ ಭೂ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಲ್ಲಲ್ಲಿ ಮನೆ ಹಾಗೂ ಅಂಗಡಿ ಮುಂಗಟ್ಟುಗಳೂ ಕುಸಿದಿವೆ. 
 
ಇಲ್ಲಿಯವರೆಗೆ 12 ಮಂದಿ ಸಾವನ್ನಪ್ಪಿದ್ದು, ದೇಹವನ್ನು ಹೊರ ತೆಗೆಯಲಾಗಿದೆ. ಅಲ್ಲದೆ ಇನ್ನೂ 30ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದು, ಅವರ ದೇಹಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದೆ. 
 
ನಿನ್ನೆ ಕೇಂದ್ರ ಹವಾಮಾನ ಇಲಾಖೆ ನೀಡಿದ್ದ ಮಾಹಿತಿ ಪ್ರಕಾರ, ಇನ್ನು ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ. 

ವೆಬ್ದುನಿಯಾವನ್ನು ಓದಿ