ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೇ ಖಾಯಂ

ಬುಧವಾರ, 29 ಜುಲೈ 2015 (12:13 IST)
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಹಂತಕರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದ್ದ ಹಿನ್ನೆಲೆಯಲ್ಲಿ ಪುನರ್ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕ್ಯುರೇಟೀವ್ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಇಂದು ನಡೆಸಿದ್ದು, ಹಂತಕರಿಗೆ ಮತ್ತೆ ಜೀವಾವಧಿ ಶಿಕ್ಷೆಯನ್ನೇ ಖಾಯಂಗೊಳಿಸಿ ಆದೇಶಿಸಿದೆ.  
 
ಸುಪ್ರೀಂ ಕೋರ್ಟ್‌ನ ಮುಖ್ಯ ನಾಯಾಧೀಶ ಹೆಚ್.ಎಲ್.ದತ್ತು ಅವರ ನೇತೃತ್ವದ ಪೀಠ, ಸರ್ಕಾರದ ಈ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ವಾದ-ವಿವಾದ ಆಲಿಸಿದ ಕೋರ್ಟ್, ಮೂವರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ರದ್ಧತಿ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಜೀವಾವಧಿ ಶಿಕ್ಷೆಯನ್ನೇ ಖಾಯಂಗೊಳಿಸಿತು.  
 
ಇನ್ನು ಪ್ರಕರಣದ ಆರೋಪಿಗಳು ತಮಿಳುನಾಡು ಮೂಲದವರಾದ ಸಂತನ್, ಮುರುಗನ್ ಹಾಗೂ ಪೆರಾರಿವಾಲನ್ ಅವರೇ ಆಗಿದ್ದು, ನೇಣು ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ. 
 
ತಮಿಳುನಾಡಿನ ಶ್ರೀಪೆರಂಬದೂರ್ ನಗರಕ್ಕೆ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಮೂಲಕ 1991 ಮೇ 21ರಂದು ಹತ್ಯೆಗೈಯ್ಯಲಾಗಿತ್ತು. 

ವೆಬ್ದುನಿಯಾವನ್ನು ಓದಿ