ರಾಜಯೋಗೀಂದ್ರ ಶ್ರೀಗಳ ಪೀಠತ್ಯಾಗಕ್ಕೆ ಭಕ್ತರ ವಿರೋಧ

ಶನಿವಾರ, 22 ನವೆಂಬರ್ 2014 (19:16 IST)
ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕದ ವಿವಾದಕ್ಕೆ ಸಂಬಂಧಿಸಿದಂತೆ ಮನನೊಂದು ರಾಜಯೋಗೀಂದ್ರ ಶ್ರೀಗಳು ಪೀಠ ತ್ಯಾಗ ಮಾಡಿದ ಘಟನೆ ಇಂದು ನಡೆಯಿತು.ಗುರುಸಿದ್ದೇಶ್ವರ ಗದ್ದುಗೆಗೆ ನಮಸ್ಕರಿಸಿ ಮಠದಿಂದ ಕಾರಿನತ್ತ ತೆರಳಿ ಕಾರಿನಲ್ಲೇ ಸ್ವಾಮೀಜಿ ಕುಳಿತಿದ್ದರು.

ಕಾರಿನ ಎದುರಿಗೆ ನಿಂತರ ಭಕ್ತರು ಮಠ ಬಿಟ್ಟು ತೆರಳದಂತೆ ಒತ್ತಾಯಿಸಿದರು. ಮಠ ಬಿಟ್ಟು ಹೋದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳಿದರು.

 ಕೆಲವು ಭಕ್ತರು ಭಾವುಕರಾಗಿ ಕಣ್ಣೀರಿಟ್ಟರು. ಸ್ವಾಮೀಜಿಗಳ ಮನವೊಲಿಗೆ ಭಕ್ತರು ಹರಸಾಹಸ ಮಾಡಿದರು. ಭಕ್ತರ ಒತ್ತಾಯದ ಮೇರೆಗೆ ಸ್ವಾಮೀಜಿಗಳು ಮಠಕ್ಕೆ ವಾಪಸಾದರು. ಆದರೆ ಪೀಠತ್ಯಾಗ ಮಾಡುವ ನಿರ್ಧಾರವನ್ನು ಮಾತ್ರ ಸ್ವಾಮೀಜಿ ಇನ್ನೂ ಹಿಂತೆಗೆದುಕೊಂಡಿಲ್ಲ. 

ಲಿಂಗಾರೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಬೇಕೆಂಬ ರಾಜಯೋಗೀಂದ್ರ ಶ್ರೀಗಳ ವಾದವನ್ನು ಮಠದ ಕೆಲವರು ಒಪ್ಪದಿರುವುದರಿಂದ ಶ್ರೀಗಳು ಮನನೊಂದಿದ್ದರು. 

 ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಸಭೆಯೊಂದನ್ನು ನಡೆಸುವ  ರಾಜಯೋಗೀಂದ್ರ ಶ್ರೀಗಳ ನಿರ್ಧಾರವನ್ನು ಮಠದ ಕೆಲವು ಸದಸ್ಯರು ವಿರೋಧಿಸಿದರು. ಇವೆಲ್ಲಾ ಕಾರಣಗಳಿಂದ ಮನನೊಂದ ಶ್ರೀಗಳು ಪೀಠತ್ಯಾಗದ ನಿರ್ಧಾರವನ್ನು ಕೈಗೊಂಡರು. 

ವೆಬ್ದುನಿಯಾವನ್ನು ಓದಿ