ನಾಳೆ ರಾಜ್ಯಕ್ಕೆ ರಾಕೇಶ್ ಪಾರ್ಥಿವ ಶರೀರ!

ಭಾನುವಾರ, 31 ಜುಲೈ 2016 (10:49 IST)
ಬಹು ಅಂಗಾಂಗ ವೈಫಲ್ಯದಿಂದ ಬೆಲ್ಜಿಯಂನಲ್ಲಿ ನಿಧನರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೇಷ್ಠಪುತ್ರ ರಾಕೇಶ್ ಪಾರ್ಥಿವ ಶರೀರ ನಾಳೆ ರಾಜ್ಯಕ್ಕೆ ಆಗಮಿಸಲಿದ್ದು, ಅವರ ಅಂತ್ಯಕ್ರಿಯೆಯನ್ನು ಸೋಮವಾರ ಮೈಸೂರು ಹೊರವಲಯದ ಟಿ.ಕಾಟೂರಿನ ಫಾರಂ ಹೌಸ್‌ನಲ್ಲಿ ನಡೆಸಲಾಗುವುದು ಎಂದು ಸಚಿವ ಮಹದೇವ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ರಾಕೇಶ್ ಪಾರ್ಥಿವ ಶರೀರವನ್ನು ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದ್ದು, ಮೈಸೂರು ಹೊರವಲಯದ ಟಿ.ಕಾಟೂರಿನ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ.
 
ಬೆಲ್ಜಿಯಂ ಪ್ರವಾಸದಲ್ಲಿದ್ದ ರಾಕೇಶ್ ಅಲ್ಲಿಗೆ ತೆರಳುವ ಮುನ್ನವೆ ಯಕೃತ್‌ (ಲಿವರ್‌) ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರವಾಸದ ವೇಳೆ ಅವರ ಆರೋಗ್ಯ ಹದಗೆಟ್ಟಿತ್ತು. ಜತೆಗೆ ಕಡಿಮೆ ರಕ್ತದ ಒತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.
 
ಬೆಲ್ಜಿಯಂ ಪ್ರವಾಸದಲ್ಲಿರುವ ಪುತ್ರನ ಅನಾರೋಗ್ಯ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ, ಪುತ್ರನ ಅನಾರೋಗ್ಯ ಕುರಿತು ಮಾಹಿತಿ ಪಡೆದುಕೊಂಡಿದ್ದು, ಕಳೆದ ಎರಡು ದಿನಗಳ ಹಿಂದೆ ಪುತ್ರನ ಆರೋಗ್ಯ ವಿಚಾರಿಸಿಕೊಳ್ಳಲು ಬೆಲ್ಜಿಯಂ ದೇಶಕ್ಕೆ ತೆರಳಿದ್ದರು. 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ