ರಮ್ಯಾ-ಕೃಷ್ಣ ಭೇಟಿ: ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಎಂದ ಎಸ್‌ಎಂಕೆ

ಶನಿವಾರ, 1 ಆಗಸ್ಟ್ 2015 (16:48 IST)
ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯಲ್ಲಿನ ಮೃತ ರೈತರ ಮನೆಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದ ನಟಿ, ಮಾಜಿ ಕಾಂಗ್ರೆಸ್ ಸಂಸದೆ ರಮ್ಯಾ, ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ರಾಜಕೀಯ ಸಂಬಂಧ ವಿಸ್ತೃತ ಚರ್ಚೆ ನಡೆಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.  
 
ನಗರದ ಸದಾಶಿವನಗರದಲ್ಲಿನ ನಿವಾಸಕ್ಕೆ ಭೇಟಿ ನೀಡಿದ್ದ ರಮ್ಯಾ, ರೈತರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಕೃಷ್ಣ ಅವರೊಂದಿಗೆ ವಿಸ್ತೃತವಾಗಿ ಚರ್ಚಿಸಿರುವ ರಮ್ಯಾ, ಬಳಿಕ ರಾಜಕೀಯದಲ್ಲಿ ಬೆಳೆಯಲು ಸಲಹೆ ಪಡೆದರು.  
 
ಈ ಭೇಟಿಯನ್ನು ಪರಾಮರ್ಶಿಸಿರುವ ಕೆಲ ಮಂದಿ ರಾಜಕೀಯ ತಜ್ಞರು, ರಮ್ಯಾ ಇನ್ನು ಮುಂದೆ  ಸಕ್ರೀಯವಾಗಿ ರಾಜಕಾರಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದಿದ್ದು, ಈ ಸಲುವಾಗಿಯೇ ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ ಎನ್ನುತ್ತಿದ್ದಾರೆ. 
 
ರಮ್ಯಾ-ಕೃಷ್ಣ ಸಂಭಾಷಣೆ: 
 
ಕೃಷ್ಣ: ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ?
ರಮ್ಯಾ: ಲಂಡನ್‌ಗೆ ತೆರಳಿದ್ದೆ.
 
ಕೃಷ್ಣ: ಯಾಕೆ ಹೋಗಿದ್ದೆ ? 
ರಮ್ಯಾ: ವಿದ್ಯಾಭ್ಯಾಸಕ್ಕೆಂದು ಜೊತೆಗೆ ಲೋಕಸಭೆಯಲ್ಲಿನ ಸೋಲು ಹಾಗೂ ಮಂಡ್ಯ ಜಿಲ್ಲಾ ನಾಯಕರ  ಕೆಲ ಮುಖಂಡರ ಕಿರಿಕಿರಿಯಿಂದ ವಿಶ್ರಾಂತಿ ಪಡೆಯಲು ತೆರಳಿದ್ದೆ.
 
ಕೃಷ್ಣ: ಬಂದ ವಿಷಯ ? 
ರಮ್ಯಾ: ಈಗಾಗಲೇ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇನೆ. ಅಲ್ಲದೆ ಇನ್ನು ಮುಂದೆ ರಾಜಕೀಯದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತೇನೆ. ಹಾಗಾಗಿ ನಿಮ್ಮ ಸಲಹೆ ಬೇಕಿದೆ. 
 
ಕೃಷ್ಣ: ನೋಡಮ್ಮಾ, ಸೋತೆ ಎಂದು ಕುಗ್ಗುವುದು, ಗೆದ್ದೆ ಎಂದು ಹಿಗ್ಗುವುದು ಸರಿಯಲ್ಲ. ಜನರು ನನ್ನನ್ನೂ ಕೂಡ ಸೋಲಿಸಿದ್ದಾರೆ ಹಾಗೂ ಗೆಲ್ಲಿಸಿಯೂ ಇದ್ದಾರೆ. ನಾನು ಮಂಡ್ಯ ಜಿಲ್ಲೆಯಲ್ಲಿ ಸುಮಾರು 25 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಜನನಾಯಕರಾದ ನಾವು ಜನರನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಗ ಮಾತ್ರ ನೀನು ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ಆದ್ದರಿಂದ ನೀನು ಎಲ್ಲಿಯಾದರೂ ಹೋಗುತ್ತಿದ್ದಲ್ಲಿ ಜಿಲ್ಲಾ ನಾಯಕರಿಗೆ ಹಾಗೂ ರಾಜ್ಯ ನಾಯಕರಿಗೆ ತಿಳಿಸಿ ಹೋಗು. ಅಲ್ಲದೆ ರಾಜ್ಯಾದ್ಯಂತ 212 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾನೂ ಕೂಡ ಸಾಂತ್ವನ ಹೇಳಿದ್ದು, ಆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ. ಜನರ ನಡುವೆ ಇದ್ದು, ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸು. 
ರಮ್ಯಾ: ಹಾಗೇ ಆಗಲಿ.
 
ಇನ್ನು ಭೇಟಿಯ ಬಳಿಕ ನಟಿ ರಮ್ಯಾ ಪ್ರತಿಕ್ರಿಯಿಸಿದ್ದು, ನನ್ನ ಹಾಗೂ ಕೃಷ್ಣ ಅವರ ಇಂದಿನ ಭೇಟಿಗೆ ವಿಶೇಷ ಅರ್ಥವಿಲ್ಲ. ಏಕೆಂದರೆ ಅವರು ನಮ್ಮ ಕುಟುಂಬದೊಂದಿಗೆ ನಿರಂತರ ಸಂಪರ್ಕ ಹೊಂದಿರುವ ವ್ಯಕ್ತಿ. ನನ್ನ ಜೀವನ ಮತ್ತು ಶಿಕ್ಷಣ ಸೇರಿದಂತೆ ಎಲ್ಲದರ ಬಗ್ಗೆಯೂ ಅವರೊಂದಿಗೆ ಮಾತನಾಡಬಹುದು ಎಂದರು. 
 
ಇದೇ ವೇಳೆ ಚಿತ್ರರಂಗದ ಬಗ್ಗೆಯೂ ಕೂಡ ಮಾತನಾಡಿದ ಅವರು, ಒಳ್ಳೆಯ ಕಥೆ ಸಿಕ್ಕಲ್ಲಿ ನಟಿಸುತ್ತೇನೆ. ಆದರೆ ಕಥೆಗಳನ್ನು ಪರಭಾಷೆಯಿಂದ ಕದ್ದು, ಡಬ್ ಮಾಡಿದಲ್ಲಿ ನಾನು ಒಪ್ಪುವುದಿಲ್ಲ ಎಂದಿದ್ದಾರೆ. 
 
ಇತ್ತೀಚೆಗೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದ ರಮ್ಯಾ ಆತ್ಮಹತ್ಯೆಗೆ ಶರಣಾದ ರೈತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದಕ್ಕೂ ಮುನ್ನ ಎಸ್.ಎಂ.ಕೃಷ್ಣ ಅವರು ಭೇಟಿ ಸಾಂತ್ವನ ಹೇಳಿದ್ದರು.  

ವೆಬ್ದುನಿಯಾವನ್ನು ಓದಿ