ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ

ಬುಧವಾರ, 17 ಸೆಪ್ಟಂಬರ್ 2014 (09:26 IST)
ಹುಬ್ಬಳ್ಳಿಯ ಬಿಜೆಪಿ ಮುಖಂಡ ಬಸವರಾಜ್ ಕುರಡಗಿಮಠ್ ಅವರ ಮೇಲೆ ಎಂಜಿನಿಯರ್ ಒಬ್ಬರ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ದಾಖಲಾಗಿದೆ.

ಈ ಮೊದಲು ಕುರಡಗಿಮಠ್ ಮೇಲೆ ತಮ್ಮ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಹೊರಿಸಿ ನಗರದ ಕೇಶ್ವಾಪುರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದ ಪೀಡಿತ ಮಹಿಳೆ ನಿನ್ನೆ ಜಿಲ್ಲಾ ನ್ಯಾಯಾಲಯದಲ್ಲಿ ಮರು ಹೇಳಿಕೆ ನೀಡಿದ್ದು ಕುರಡಗಿಮಠ್ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. 
 
"ನಮ್ಮದೇ ಏರಿಯಾದಲ್ಲಿ ವಾಸಿಸುವ ಕುರಡಗಿಮಠ  ಹೇಗೋ ನನ್ನ ಮೊಬೈಲ್ ನಂಬರ್ ಪಡೆದುಕೊಂಡು ಕರೆ ಮಾಡಲು ಆರಂಭಿಸಿದ್ದಾರೆ. ಪರಿಚಯ ಮಾಡಿಕೊಂಡ ನಂತರ ನಮ್ಮ ಮಗಳನ್ನು ಪ್ರತಿಷ್ಠಿತ ಕಾಲೇಜಿಗೆ ಸೇರಿಸಲು ಸಹಾಯ ಮಾಡಿದ ಅವರು, ಸ್ವಲ್ಪ ಸಮಯದ ನಂತರ ಲವ್ ಮಾಡು ಎಂದು ನನ್ನನ್ನು ಪೀಡಿಸ ತೊಡಗಿದ್ದಾರೆ. ನನ್ನನ್ನು ಪ್ರೀತಿಸದಿದ್ದರೆ ನಿನ್ನ ಗಂಡನಿಗೆ ಹೊಡಿಸುತ್ತೇನೆ. ಮಕ್ಕಳಿಗೆ ಅಪಾಯ ವನ್ನುಂಟು ಮಾಡುತ್ತೇನೆ ಎಂದು ಬೆದರಿಸಲು ಪ್ರಾರಂಭಿಸಿದ್ದಾರೆ". 
 
"ನಾನು ನನ್ನ ಸ್ನೇಹಿತೆಯರು ಮತ್ತು ಮಕ್ಕಳೊಂದಿಗೆ ಗೋವಾದ ಪಾಮೋಲಿಯಂ ಬೀಚ್‌ಗೆ ಪ್ರವಾಸಕ್ಕೆ ಹೋದಾಗ ನಮ್ಮನ್ನು ಹಿಂಬಾಲಿಸಿದ ಅವರು ಬೆದರಿಕೆ ಹಾಕಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ" ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಒಬ್ಬರ ಪತ್ನಿಯಾಗಿರುವ ಪೀಡಿತೆ ಹೇಳಿಕೆ ದಾಖಲಿಸಿದ್ದಾರೆ.
 
ಬಿಜೆಪಿ ಮುಖಂಡನ ವಿರುದ್ಧ ಈಗ ಅತ್ಯಾಚಾರ ಆರೋಪ ದಾಖಲಿಸಿರುವ ಪೋಲಿಸರು ಇಂದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದ್ದಾರೆ. 
 
ಕುರಡಗಿಮಠ್ ಅವರ ಕೇಶ್ವಾಪುರ ನಿವಾಸವನ್ನು ಪರಿಶೀಲಿಸಿರುವ ಪೋಲಿಸರಿಗೆ ಅವರು ಭೂ ಮಾಪಿಯಾಗಳ ಜತೆ ಶಾಮೀಲಾಗಿರುವ ಕುರಿತು ದಾಖಲೆಗಳು ಲಭ್ಯವಾಗಿದ್ದು, ಅವರ ಮೇಲೆ ಗೂಂಡಾ ಕಾಯ್ದೆ ಕೂಡಾ ದಾಖಲಾಗಿದೆ. 
 
ಸಾಲು ಸಾಲು ಹುದ್ದೆಗಳ ಒಡೆಯನಾಗಿರುವ ಬಿಜೆಪಿ ಮುಖಂಡ ಈಗ ಸಾಲು ಸಾಲು ಪ್ರಕರಣಗಳನ್ನೆದುರಿಸುವ ಸನ್ನೀವೇಶ ಸೃಷ್ಟಿಯಾಗಿದೆ. 

ವೆಬ್ದುನಿಯಾವನ್ನು ಓದಿ