ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣ: ಕೇಂದ್ರ ಮಹಿಳಾ ಆಯೋಗಕ್ಕೆ ಮಠದಿಂದ ಪತ್ರ

ಗುರುವಾರ, 24 ಸೆಪ್ಟಂಬರ್ 2015 (18:32 IST)
ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷ ರಾಘವೇಶ್ವರ ಶ್ರೀಗಳ ವಿರುದ್ಧ ಇರುವ ಅತ್ಯಾಚಾರ ಪ್ರಕರಣವನ್ನು ಕರ್ನಾಟಕ ಮಹಿಳಾ ಆಯೋಗವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಒಪ್ಪಿಸಿರುವ ಹಿನ್ನೆಲೆಯಲ್ಲಿ ಮಠದ ವತಿಯಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಇಂದು ಪತ್ರ ಬರೆಯಲಾಗಿದೆ. 
 
ಹೌದು, ಮಠದ ವತಿಯಿಂದ ರವಾನಿಸಲಾಗಿರುವ ಈ ಪತ್ರದಲ್ಲಿ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಅವರಿಗೆ 12 ಪ್ರಶ್ನೆಗಳನ್ನು ಕೇಳಲಾಗಿದ್ದು, ರಾಜ್ಯ ಮಹಿಳಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. 
 
ಪತ್ರದಲ್ಲಿ ಶ್ರೀಗಳ ವಿರುದ್ಧ ಷಡ್ಯಂತ್ರ ಸಾಧಿಸುವ ಸಲುವಾಗಿ ಎರಡು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದೆಲ್ಲವೂ ಕೂಡ ಮಠದ ವಿನಾಶಕ್ಕಾಗಿ ಮಾಡುತ್ತಿರುವ ಷಡ್ಯಂತ್ರ ಎಂದು ದೂರಲಾಗಿದೆ. 
 
ಮಠ ಪತ್ರದಲ್ಲಿ ಕೇಳಿರುವ ಕೆಲ ಪ್ರಶ್ನೆಗಳು ಈ ಕೆಳಕಂಡಂತಿವೆ:
-ಕೇವಲ ದೂರುದಾರರ ಮಾತನ್ನಷ್ಟೇ ಕೇಳುವುದು ಎಷ್ಟು ಸರಿ ?
-ಶ್ರೀಗಳ ಭೇಟಿಗೆ ಬಂದ ಮಹಿಳಾ ಭಕ್ತರವನ್ನು ಅವಮಾನಿಸಿದ್ದೇಕೆ ?
-ದೆಹಲಿಯಿಂದ ಬೆಂಗಳೂರಿಗೆ ಬರಲು ನಿಮಗೆ ಹಣ ನೀಡಿದ್ದಾರೆಯೇ ?
-ಸರ್ಕಾರ ಶ್ರೀಗಳಿಗೆ ಸಾಥ್ ನೀಡುತ್ತಿದೆ ಎಂದು ಆರೋಪಿಸುಲಾಗುತ್ತಿದೆ. ಆದರೆ ಸರ್ಕಾರ ಸಾಥ್ 
 ನೀಡಿದ್ದಲ್ಲಿ ಜಾಮೀನು ವಜಾಕ್ಕೆ ಆಗ್ರಹಿಸುತ್ತಿರಲಿಲ್ಲ. 
-ಕೋರ್ಟ್ ನ್ಯಾಯ ಪ್ರಕ್ರಿಯೆ ನಿಮಗೆ(ರಾಜ್ಯ ಮಹಿಳಾ ಆಯೋಗ) ಹಾಸ್ಯಾಸ್ಪದವೇ ?
-ಆಯೋಗದ ಈ ನಿರ್ಧಾರ ಬೇಜವ್ಬಾರಿಯಲ್ಲವೇ. ಇನ್ನಿತರೆ....
 
ಇನ್ನು ಮಠದಲ್ಲಿ ರಾಮಕತಾ ಗಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೇಮಲತಾ ಅವರು ತಮ್ಮ ಮೇಲೆ ಶ್ರೀಗಳು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಬಳಿಕ ಈ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದರು. ಈ ನಡುವೆ ರಾಜ್ಯ ಮಹಿಳಾ ಆಯೋಗವು ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ವರ್ಗಾಯಿಸಿದೆ. ಈ ಹಿನ್ನೆಲೆಯಲ್ಲಿ ಮಠದ ವತಿಯಿಂದ ಪತ್ರ ಬರೆಯಲಾಗಿದೆ. 

ವೆಬ್ದುನಿಯಾವನ್ನು ಓದಿ