ಶಾಲಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: ಸಿಎಂ ನೇತೃತ್ವದಲ್ಲಿ ಸಭೆ

ಶುಕ್ರವಾರ, 31 ಅಕ್ಟೋಬರ್ 2014 (09:37 IST)
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಶಾಲಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ರಾಜ್ಯಾದ್ಯಂತ ಆತಂಕವನ್ನು ಸೃಷ್ಟಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಮಹತ್ವದ ಸಭೆ ನಡೆಸಲಿದ್ದಾರೆ.

ಇಂದು ಸಂಜೆ  5.15 ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
 
ತಂದೆ- ತಾಯಿಗಳು ಎಂದು ಪೂಜಿಸಲ್ಪಡುವ  ಶಿಕ್ಷಕರೇ ಪುಟ್ಟ ಮಕ್ಕಳ ಮೇಲೆ ಕೀಚಕತನವನ್ನು ಪ್ರದರ್ಶಿಸುತ್ತಿರುವುದು ರಾಜ್ಯಾದ್ಯಂತ ವ್ಯಾಕುಲತೆಯನ್ನು ಸೃಷ್ಟಿಸಿದೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುವ ಸನ್ನಿವೇಶ  ನಿರ್ಮಾಣವಾಗುತ್ತಿದೆ. 
 
ಕಳೆದ ನಾಲ್ಕು ತಿಂಗಳಲ್ಲಿ ಬೆಂಗಳೂರಿನ ಶಾಲೆಗಳಲ್ಲಿ  ನಾಲ್ಕು ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು, ಕಳೆದೆಂಟು ದಿನಗಳಲ್ಲಿ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಕಳೆದ ತಿಂಗಳ ಮಾರತ್‌ಹಳ್ಳಿಯ ವಿಬ್ ಗಯಾರ್ ಶಾಲೆಯಲ್ಲಿ 6 ವರ್ಷದ ಬಾಲಕಿಯ ಮೇಲೆ  ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದರೆ, ಕಳೆದ ವಾರ ಜಾಲಹಳ್ಳಿಯ ಖಾಸಗಿ ಶಾಲೆಯೊಂದರಲ್ಲಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಮತ್ತೆ ಅದೇ ರೀತಿಯ ಘಟನೆ ಮರುಕಳಿಸಿದ್ದು ಅಕ್ಟೋಬರ್  28 ರಂದು ಇಂದಿರಾ ನಗರದ ಕೆಂಬ್ರಿಡ್ಜ್ ಶಾಲೆಯಲ್ಲಿ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದ್ದು, ನಿನ್ನೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ