ಡಿ.ಕೆ.ರವಿ ತಮ್ಮಿಂದ 10 ಲಕ್ಷ ಹಣ ಪಡೆದಿದ್ದರು: ರೋಹಿಣಿ ಸಿಂಧೂರಿ

ಗುರುವಾರ, 26 ಮಾರ್ಚ್ 2015 (11:08 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಅವರ ಸಹೋದ್ಯೋಗಿ ರೋಹಿಣಿ ಸಿಂಧೂರಿ ಅವರು ಸಿಐಡಿ ಪೊಲೀಸರೊಂದಿಗೆ ಪ್ರತಿಕ್ರಿಯಿಸಿದ್ದು, ರವಿ ಅವರು ಆಸ್ತಿ ಖರೀದಿಗೆಂದು ತಮ್ಮಿಂದ 10 ಲಕ್ಷ ರೂ. ಹಣ ಪಡೆದಿದ್ದರು ಎಂದು ಹೇಳಿಕೆ ನೀಡಿದ್ದರು ಎಂಬುದಾಗಿ ತಿಳಿದು ಬಂದಿದೆ.
  
ರೋಹಿಣಿ ಅವರೇ ನೇರವಾಗಿ ಪೊಲೀಸರನ್ನು ಮಾರ್ಚ್ 18ರಂದು ಭೇಟಿ ಮಾಡಿದ್ದು, ಅವರೇ ಖುದ್ದು ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೆ ರವಿ ಅವರು 100 ಎಕರೆ ಜಮೀನು ಖರೀದಿಸಲು ಯೋಜನೆ ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರವಿ ಅವರ ಕೋರಿಕೆ ಮೇರೆಗೆ ತಮ್ಮ ಪತಿ ಆರ್ ಅಂಡ್ ಹೆಚ್ ಪ್ರಾಪರ್ಟೀಸ್ ಎಂಬ ಕಂಪನಿ ಹೆಸರಿಗೆ ಕಳೆದ ಸೆಪ್ಟಂಬರ್‌ನಲ್ಲಿ ಹಣ ಪಾವತಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ ಎಂಬುದಾಗಿ ಉನ್ನತ ಮೂಲಗಳು ತಿಳಿಸಿವೆ.  
 
ಇನ್ನು ರವಿ ಅವರು ರೋಹಿಣಿ ಅವರಿಗೆ ತಾವು ನಿಧನರಾದ ಮಾರ್ಚ್ 16ರ ಬೆಳಗ್ಗೆ 9.50ರ ವೇಳೆಯಲ್ಲಿ ವಾಟ್ಸ್ ಅಪ್ ಮೂಲಕ ಕೊನೆಯ ಸಂದೇಶವನ್ನು ರವಾನಿಸಿದ್ದು, ಆ ಸಂದೇಶದಲ್ಲಿ ರೋಹಿಣಿ ಅವರ ಮೇಲಿದ್ದ ಪ್ರೀತಿಯನ್ನು ಪ್ರಸ್ತಾಪಿಸಿದ್ದಾರೆ. ಜೊತೆಗೆ ಅವರೊಂದಿಗಿದ್ದ ಉತ್ತಮ ಸ್ನೇಹ ಸಂಬಂಧದ ಬಗ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜೊತೆಗೆ ನೀನಿಲ್ಲದ ಬಾಳು ನನಗೇಕೆ. ನನಗೆ ಕೊನೆ ಪರಿಹಾರ ಸಾವು ಎಂದು ಸಂದೇಶ ರವಾನಿಸಿದ್ದರು ಎಂದು ರೋಹಿಣಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.   
 
ರವಿ ಅವರು ಸಾವನ್ನಪ್ಪುವುದಕ್ಕೂ ಒಂದಿ ದಿನ ಮುಂಚಿತವಾಗಿ ರೋಹಿಣಿ ಅವರಿಗೆ ಸಂದೇಶ ರವಾನಿಸಿದ್ದು, ಅದರಲ್ಲಿ ನಾನು ಒಂದು ಅಂತಿಮ ನಿರ್ಧಾರಕ್ಕೆ ಬಂದಿದ್ದೇನೆ. ನಿನ್ನ ಮೇಲಿನ ಪ್ರೀತಿಗಾಗಿ ನಾನು ನನ್ನ ಪ್ರೀತಿ ವಿಷಯವನ್ನು ಬಹಿರಂಗಗೊಳಿಸುವುದಿಲ್ಲ. ಮುಂದಿನ ಜನ್ಮವೆಂದಿದ್ದರೆ ನಾವು ಮುಂದಿನ ಜನ್ಮದಲ್ಲಿ ಒಂದಾಗೋಣ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರೋಹಿಣಿ ಅವರೂ ಕೂಡ ಸಂದೇಶ ರವಾನಿಸಿದ್ದು, ಯಾವುದೇ ರೀತಿಯ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಮರು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.  
 
ಇನ್ನು ನಿಮ್ಮ ಹಾಗೂ ರವಿ ನಡುವೆ ಹಣದ ವಿಚಾರ ಹೇಗೆ ಉದ್ಭವಿಸಿತು ಎಂದು ತನಿಖಾಧಿಕಾರಿಗಳು ರೋಹಿಣಿ ಅವರನ್ನು ಪ್ರಶ್ನಿಸಿದ್ದು, ರವಿ ಅವರು ಕೋಲಾರದ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ನಾನು ಮತ್ತು ನನ್ನ ಪತಿ ಕೋಲಾರಕ್ಕೆ ತೆರಳಿದ್ದೆವು. ಆ ವೇಳೆ ನಮ್ಮ ಬಳಿ ರವಿ ಅವರು ಹಣ ನೀಡುವಂತೆ ಮನವಿ ಮಾಡಿದ್ದರು ಆದರೆ ಅವರ ಮನವಿಯನ್ನು ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅಷ್ಟೊಂದು ಮೊತ್ತದ ಹಣ ಏಕೆ ಬೇಕು ಎಂದು ಅವರನ್ನು ಪ್ರಶ್ನಿಸಿದ್ದೆ. ಆಗ 100 ಎಕರೆ ಜಮೀನನ್ನು ಕೊಳ್ಳುವ ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ನಾನು ಹಲವರಿಂದ ಸಾಲ ಪಡೆಯಲು ಯತ್ನಿಸುತ್ತಿದ್ದೇನೆ ಎಂಬುದಾಗಿ ರವಿ ತಿಳಿಸಿದ್ದರು. ಬಳಿಕ, ರೋಹಿಣಿ ಹಣ ಕೊಡಲು ಸಮ್ಮತಿಸಿ ಅಷ್ಟು ದೊಡ್ಡ ಮೊತ್ತದ ಹಣ ನೀಡುವುದು ತಮಾಷೆಯ ಮಾತಲ್ಲ ಎಂದೂ ಕೂಡ ರವಿ ಬಳಿಯಲ್ಲಿ ಉದ್ಗರಿಸಿದ್ದೆ  ಎಂದು ರೋಹಿಣಿ ಹೇಳಿಕೆ ನೀಡಿದ್ದಾರೆ.
 
ಇನ್ನು ರವಿ ಅವರು ನಿಗೂಢವಾಗಿ ಸಾವನ್ನಪ್ಪಿದ ಸುದ್ದಿ ತಿಳಿದ ಬಳಿಕ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ರೋಹಿಣಿ ಕಟೋಚ್ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಅವರನ್ನೂ ರೋಹಿಣಿ ಅವರು ಸಂಪರ್ಕಿಸಿದ್ದರು ಎನ್ನಲಾಗಿದೆ. 
 
ಘಟನೆ ಸಂಭವಿಸಿದ ಎರಡು ದಿನಗಳ ತರುವಾಯ ಅಂದರೆ ಮಾರ್ಚ್ 18ರಂದು ಸಿಐಡಿಯ ಉಪ ಪೊಲೀಸ್ ಮಹಾ ನಿರ್ದೇಶಕ ಸೌಮೆಂಡು ಮುಖರ್ಜಿ ಅವರನ್ನು ಭೇಟಿ ಮಾಡಿ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತೆ ಮನವಿಯನ್ನೂ ಮಾಡಿದ್ದರು ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ