ಜಾರಕಿಹೋಳಿ ರಾಜೀನಾಮೆ ವಿಚಾರ: ಸಂಧಾನಕ್ಕಾಗಿ ಕೆಂಪಯ್ಯ ಭೇಟಿ

ಬುಧವಾರ, 28 ಜನವರಿ 2015 (09:07 IST)
ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಆಪ್ತ ಸಲಹೆಗಾರ ಕೆಂಪಯ್ಯನವರು ಜಾರಕಿಹೋಳಿ ಅವರ ಗೋಕಾಕ್ ನಿವಾಸಕ್ಕೆ ತೆರಳಿ ಅವರ ಮನವೊಲಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕೆಂಪಯ್ಯ ಅವರೊಂದಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಎಸ್. ರವಿ ಸಾಥ್ ನೀಡಿದ್ದಾರೆ. 
 
ರಾಜೀನಾಮೆ ಹಿನ್ನೆಲೆಯಲ್ಲಿ ಅಬಕಾರಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ, ತಮ್ಮ ಖಾತೆಯ ಬಗೆಗಿನ ಅಸಮಾಧಾನದಿಂದಾಗಿ ರಾಜಿನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭಾ ಕಾರ್ಯದರ್ಶಿಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ತಮ್ಮ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ರವಾನೆ ಮಾಡಿದ್ದರು. 
 
ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಸತೀಶ್ ಜಾರಕೀಹೋಳಿ, ನನ್ನ ರಾಜೀನಾಮೆಗೆ ಯಾವುದೇ ಅಸಮಾಧಾನ ಕಾರಣವಲ್ಲ. ಪಕ್ಷದ ಚಟುವಟಿಕೆಗಳಲ್ಲಿ ನಾನು ಹೆಚ್ಚಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ನನ್ನ ವೈಯುಕ್ತಿಕ ಆಸಕ್ತಿಯ ಕೆಲ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ರಾಜಿನಾಮೆ ನೀಡುತ್ತಿದ್ದೇನೆ. ಅಲ್ಲದೆ ತಾವು ಮುಖ್ಯಮಂತ್ರಿಗಳೊಂದಿಗೆ ಯಾವುದೇ ರೀತಿಯ ಅಸಮಾಧಾನ ಹೊಂದಿಲ್ಲ. ಮುಂದಿನ ಮೂರೂವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದಿದ್ದರು.  

ವೆಬ್ದುನಿಯಾವನ್ನು ಓದಿ