ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಿವೃತ್ತ ಐಜಿಪಿ ಭಾಗಿ ಶಂಕೆ: ಸಿಐಡಿಯಿಂದ ವಿಚಾರಣೆ

ಗುರುವಾರ, 8 ಅಕ್ಟೋಬರ್ 2015 (13:53 IST)
ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಿವೃತ್ತ ಐಜಿಪಿ ರವೀಂದ್ರ ಪ್ರಸಾದ್ ಅವರನ್ನು ಇಂದು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 
 
ಹೌದು, ನಾವು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದಾಗ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರವೀಂದ್ರ ಪ್ರಸಾದ್ ಅವರಿಗೆ ವಂತಿಗೆ ರೂಪದಲ್ಲಿ ಲಂಚದ ಹಣ ನೀಡುತ್ತಿದ್ದೆವು ಎಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಬಂಧಿತ ಬುಕ್ಕಿಗಳು ನೀಡಿದ ಮಾಹಿತಿ ಆಧಾರದ ಮೇಲೆ ರವೀಂದ್ರ ಪ್ರಸಾದ್ ಅವರನ್ನು ವಶಕ್ಕೆ ಪಡೆದಿರುವ ಎಸ್‌ಪಿ ಕುಮಾರಸ್ವಾಮಿ ಅವರ ತನಿಖಾಧಿಕಾರಿಗಳ ತಂಡವು ಇಂದು ವಿಚಾರಣೆಗೊಳಪಡಿಸಿದೆ. 
 
ರವೀಂದ್ರ ಪ್ರಸಾದ್ ಅವರು ಭಾಗಿಯಾದ ಬಗ್ಗೆ ಬುಕ್ಕಿಗಳು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ನೋಟಿಸ್ ನೀಡಿದ್ದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಪರಿಣಾಮ ಇಂದು ರವಿಂದ್ರ ಪ್ರಸಾದ್ ಅವರು ನಗರದ ಸಿಐಡಿ ಕಚೇರಿಗೆ ಇಂದು ಹಾಜರಾಗಿ ವಿಚಾರಣೆಗೆ ಒಳಪಟ್ಟಿದ್ದಾರೆ. ರವಿಂದ್ರ ಪ್ರಸಾದ್ ಅವರು ಕಳೆದ ತಿಂಗಳು ಕೆಲಸದಿಂದ ನಿವೃತ್ತಿ ಹೊಂದಿದ್ದರು. 
 
ಇನ್ನು ಈ ಪ್ರಕರಣವನ್ನು ಕಳೆದ ಹಲವು ದಿನಗಳಿಂದ ತನಿಖೆ ನಡೆಸುತ್ತಿದ್ದ ಸಿಐಡಿ ತನಿಖಾಧಿಕಾರಿಗಳು, ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ