ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧ ಸಹದೇವ ಅಂತ್ಯಕ್ರಿಯೆ

ಸೋಮವಾರ, 15 ಫೆಬ್ರವರಿ 2016 (13:41 IST)
ವಿಜಯಪುರ:  ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ಜತೆ ಕಾಳಗದಲ್ಲಿ ಹುತಾತ್ಮರಾದ ಸಹದೇವ ಮಾರುತಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ  ಇಂದು ಬೆಳಿಗ್ಗೆ ವಿಜಯಪುರದ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಸಚಿವ ಎಸ್.ಆರ್.ಪಾಟೀಲ್, ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಗಣ್ಯರು ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಪಾರ್ಥಿವ ಶರೀರಕ್ಕೆ ತಂದೆ ಮಾರುತಿ ಮೋರೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ಬಂಧುಬಾಂಧವರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಳಸಂಗ ಗ್ರಾಮದಲ್ಲಿ ಅವರ ಮನೆಯ ಪಕ್ಕದಲ್ಲಿರುವ ಜಮೀನಿನಲ್ಲೇ ಸಹದೇವ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
 
ಸಚಿವ ಎಸ್.ಆರ್.ಪಾಟೀಲ್ ಅವರು ಯೋಧನ ತಂದೆ ಮಾರುತಿ ಮೋರೆ ಅವರಿಗೆ ಬಿಎಲ್ ಡಿ ವತಿಯಿಂದ 5 ಲಕ್ಷ ರುಪಾಯಿ ಪರಿಹಾರದ ಚೆಕ್ ಅನ್ನು ವಿತರಿಸಿದರು. 
ಇನ್ನು ಸರ್ಕಾರದಿಂದ 25 ಲಕ್ಷ ರುಪಾಯಿ, ನಾಲ್ಕು ಎಕರೆ ಜಮೀನು, ಕುಟುಂಬ ಬಯಸಿದ ಯಾವುದೇ ಜಿಲ್ಲೆಯಲ್ಲಿ ಒಂದು ನಿವೇಶನ ಮತ್ತು ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುತ್ತದೆ ಎಂದು ಪಾಟೀಲ್ ವಿವರಿಸಿದರು. 

ವೆಬ್ದುನಿಯಾವನ್ನು ಓದಿ