ಸತೀಶ್ ರಾಜೀನಾಮೆ ವಾಪಾಸ್ ಪಡೆಯಲಿದ್ದಾರೆ: ರಮೇಶ್ ಜಾರಕಿಹೋಳಿ

ಬುಧವಾರ, 28 ಜನವರಿ 2015 (15:40 IST)
ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಲಾಗುತ್ತಿದ್ದು, ತಮ್ಮ ಸಹೋದರ ಸಚಿವ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಇಂದು ಹಿಂಪಡೆಯಲಿದ್ದಾರೆ ಎಂದು ಅಬಕಾರಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ಅವರ ಸಹೋದರ ರಮೇಶ್ ಜಾರಕಿಹೋಳಿ ಇಂದು ತಿಳಿಸಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಯಾರಾದರೂ ಓರ್ವರು ಒಪ್ಪಿಗೆ ಸೂಚಿಸಿದರೆ ಎಲ್ಲರೂ ಸಮ್ಮತಿ ಸೂಚಿಸಿದಂತೆಯೇ. ಯಾರದೂ ವಿರೋಧವಿರುವುದಿಲ್ಲ ಎಂದಿರುವ ಅವರು, ನಮ್ಮ ಸಹೋದರ ತಮ್ಮ ಅಬಕಾರಿ ಸಚಿವ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಹಿಂಪಡೆಯಲಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ಸಹೋದರನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಕೆಲ ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ತಮ್ಮ ಸಹೋದರ ಈ ರೀತಿಯ ರಾಜೀನಾಮೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಆದರೆ ಇಂದು ಸಂಜೆ ವೇಳೆಗೆ ಎಲ್ಲವೂ ಸರಿಹೋಗಲಿವೆ ಎಂದರು. 
 
ಬಳಿಕ ಮಾತನಾಡಿದ ಅವರು ಇದರಿಂದ ಸಿಎಂ ಸಿದ್ದರಾಮಯ್ಯನವರಿಗಾಗಲಿ ಅಥವಾ ಕಾಂಗ್ರೆಸ್ ಪಕ್ಷಕ್ಕಾಗಲಿ ಯಾವುದೇ ರೀತಿಯ ಮುಜುಗರವಾಗಿಲ್ಲ ಎಂದ ಅವರು, ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಲಾಗುತ್ತಿದೆ. ಸಭೆ ಮುಗಿದ ಬಳಿಕ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸಿ ಅಂತಿಮ ನಿರ್ಧಾರವನ್ನು ಘೋಷಿಸಲಾಗುತ್ತದೆ ಎಂದಿದ್ದಾರೆ. 
 
ಅಬಕಾರಿ ಇಲಾಖಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸತೀಶ್ ಜಾರಕಿಹೋಳಿ, ನಿನ್ನೆ ಫ್ಯಾಕ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. 

ವೆಬ್ದುನಿಯಾವನ್ನು ಓದಿ