ಅಲೋಕ್ ಅಮಾನತಿನಿಂದ ಪ್ರಕರಣ ಮುಗಿಯಲ್ಲ: ಹೆಚ್‌ಡಿಕೆ

ಭಾನುವಾರ, 24 ಮೇ 2015 (15:46 IST)
ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದೇ ಇದಕ್ಕೆ ಕಾರಣವಾಗಿದ್ದು, ಪ್ರಕರಣದ ಪಾಪಕ್ಕೆ ಸಿಎಂ ಹಾಗೂ ಗೃಹ ಸಚಿವರೇ ಹೊಣೆ ಎನ್ನುವ ಮೂಲಕ ಗಂಭೀರ ಆರೋಪ ಮಾಡಿದ್ಧಾರೆ.
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಒಂದಂಕಿ ಲಾಟರಿ ದಂಧೆ ಕುರಿತು ನಾನು 2013ರ ಡಿಸೆಂಬರ್‌ ತಿಂಗಳಿನಲ್ಲಿಯೇ ಸರ್ಕಾರಕ್ಕೆ ಪತ್ರ ಬರೆದು ದಂಧೆ ಬಗ್ಗೆ ಗಮನ ಸೆಳೆದಿದ್ದೆ. ಆದರೆ ಆಗ ನಾನು ನೀಡಿದ ಸೂಚನೆಯನ್ನು ಸುಳ್ಳು ಹೇಳುತ್ತಿದ್ದಾರೆ ಎಂದು ನಿರ್ಲಕ್ಷ್ಯಿಸಿದರು ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು. 
 
ಮಾತು ಮುಂದುವರಿಸಿ ಅಲೋಕ್‌ ಕುಮಾರ್‌ ಅಮಾನತಿನಿಂದ ಪ್ರಕರಣ ಸುಖಾಂತ್ಯ ಕಾಣುವುದಿಲ್ಲ. ಬಂಧಿತ ಪರಿರಾಜನ್ ಓರ್ವ ಏಜೆಂಟ್ ಆಗಿದ್ದಾನೆ ಅಷ್ಟೇ. ಆದರೆ ಪ್ರಕರಣದಲ್ಲಿ ನಿಜವಾದ ಕಳ್ಳರು ಎಸಿ ರೂಮಿನಲ್ಲಿ ಕುಳಿತು ಆರಾಮದಿಂದಿದ್ದಾರೆ. ಆದ್ದರಿಂದ ಸರ್ಕಾರ ಅಂತಹವನ್ನು ಮೊದಲು ಪತ್ತೆ ಹಚ್ಚಿ ಬಂಧಿಸಲಿ. ಅವರ ಹೆಸರುಗಳನ್ನು ಇದಾಗಲೇ ಖಾಸಗಿ ಸುದ್ದಿ ವಾಹಿನಿಗಳು ಸುದ್ದಿ ಬಿತ್ತರಿಸಿವೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದರು. 
 
ಬಳಿಕ, ಪ್ರತಿಪಕ್ಷಗಳ ಸದಸ್ಯರು ದನ ಕಾಯೋಕೆ ಇದ್ದಾರೆಯೇ ಎಂದು ಪತ್ರಕರ್ತರನ್ನು ಪ್ರಶ್ನಿಸಿದ ಅವರು, ಇಂತಹ ಸರ್ಕಾರ ನಮಗೆ ಬೇಕಾ? ಇನ್ನೆರಡು ಮೂರು ದಿನಗಳಲ್ಲಿ ಲಾಟರಿ ದಂಧೆ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಪಕ್ಷದ ವತಿಯಿಂದ ವಿವರಿಸಿ ಹೋರಾಟ ನಡೆಸಲಿದ್ದೇವೆ ಎಂದರು. 

ವೆಬ್ದುನಿಯಾವನ್ನು ಓದಿ