ಇಂದು ದ್ವಿತೀಯ ಪಿಯುಸಿ ಪರೀಕ್ಷೆ, ಚುನಾವಣಾ ಮಾದರಿಯಲ್ಲಿ ಬಿಗಿಭದ್ರತೆ

ಗುರುವಾರ, 9 ಮಾರ್ಚ್ 2017 (09:12 IST)
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಚುನಾವಣಾ ಮಾದರಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

 
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಪದೇ ಪದೇ ಬೆಳಕಿಗೆ ಬಂದಿರುವುದರಿಂದ ಈ ಭಾರಿ ಬಿಗಿ ಭದ್ರತೆಯಲ್ಲಿ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಸ್ಟ್ರಾಂಗ್ ರೂಮ್‌ಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಅಳವಡಿಸಲಾಗಿದ್ದು ಹಾಗೂ ಭದ್ರತಾ ಸಿಬ್ಬಂದಿಗೆ ಕೂಡ ಗುರುತಿನ ಪತ್ರವನ್ನು ವಿತರಿಸಲಾಗಿದೆ. ಜತೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
 
ಪರೀಕ್ಷಾ ಕೇಂದ್ರಗಳ ಸುತ್ತ ಇನ್ನೂರು ಮೀಟರುಗಳಷ್ಟು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದು, ಯಾವುದೇ ಝೆರಾಕ್ಸ್ ಕೇಂದ್ರಗಳು ತೆರೆದಿರುವಂತಿಲ್ಲ. ಜನ ಗುಂಪುಗೂಡಿ ಚರ್ಚಿಸದಂತೆ ನಿಷೇಧಾಜ್ಞೆ ಹೇರಲಾಗಿದೆ.
 
ಬಾಲಕರು -3,48,562, ಬಾಲಕಿಯರು - 3,35,909, ತೃತೀಯ ಲಿಂಗಿಗಳು - 19 ಸೇರಿದಂತೆ ಒಟ್ಟು  6,84,490 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
 
ಈ ಬಾರಿ ವಾಣಿಜ್ಯ ವಿಭಾಗದಲ್ಲಿ 2,48,423 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,18,748 ವಿದ್ಯಾರ್ಥಿಗಳು ಹಾಗೂ ಕಲಾ ವಿಭಾಗದಲ್ಲಿ 2,17,075 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
 
ರಾಜ್ಯಾದ್ಯಂತ 2175 ಪರೀಕ್ಷಾ ಕೇಂದ್ರಗಳಿದ್ದು, ಈ ಪೈಕಿ 1714 ಸಾಮಾನ್ಯ ಪರೀಕ್ಷಾ ಕೇಂದ್ರಗಳು, 309 ಸೂಕ್ಷ್ಮ ಕೇಂದ್ರಗಳು ಹಾಗೂ 152 ಅತಿ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿದೆ.
 
2016ರಲ್ಲಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ 14 ಆರೋಪಿಗಳ ಪೈಕಿ 8 ಮಂದಿ ಜಾಮೀನಿನ ಮೇಲೆ ಹೊರಗಿದ್ದಾರೆ.
 

ವೆಬ್ದುನಿಯಾವನ್ನು ಓದಿ