ಸರ್ಕಾರಿ ವೈದ್ಯರ ರಾಜೀನಾಮೆ ನಿರ್ಧಾರದ ಹಿಂದಿನ ಒಳಮರ್ಮವೇನು?

ಶುಕ್ರವಾರ, 24 ಅಕ್ಟೋಬರ್ 2014 (13:36 IST)
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ವೈದ್ಯರು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿರುವುದರ ಹಿಂದಿನ ಒಳಮರ್ಮ ಬೇರೆಯಿದೆಯೆಂದು ಹೇಳಲಾಗುತ್ತಿದೆ.  ಇದೇ 27ರಂದು ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ವೈದ್ಯರು ತೆಗೆದುಕೊಂಡಿದ್ದರು. ರಾಜೀನಾಮೆ ನೀಡಿದ ಬಳಿಕವೂ  ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವನ್ನು ವಿಧಿಸಿದ್ದಾರೆ.

ಬೇಡಿಕೆ ಈಡೇರದಿದ್ದರೆ ತಿಂಗಳ ನಂತರ ಕೆಲಸ ನಿಲ್ಲಿಸುತ್ತೇವೆ ಎಂದು ಸರ್ಕಾರಿ ವೈದ್ಯರ ಸಂಘದ ಅಧ್ಯಕ್ಷ ವೀರಭದ್ರಯ್ಯ ಹೇಳಿದ್ದರು. ಆದರೆ ವೈದ್ಯರ ಸಂಘವು ಮುಷ್ಕರ ನಡೆಸುತ್ತಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಅದರ ಒಳಮರ್ಮವೇ ಬೇರೆಯಿದೆಯೆಂದು ಹೇಳಲಾಗುತ್ತಿದೆ. 
 
ಸರ್ಕಾರದ ಅನುಮತಿ ಇಲ್ಲದೇ ಡಾ. ರವೀಂದ್ರ ಲಂಡನ್  ಪ್ರವಾಸ ಕೈಗೊಂಡ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿಯಾಗಿತ್ತು. ನೋಟಿಸ್ ವಾಪಸ್‌ಗೆ ಒತ್ತಾಯ ಮಾಡುತ್ತಿರುವ ರವೀಂದ್ರ ಈ ರೀತಿ ವೈದ್ಯರ ಸಂಘದ ಮೂಲಕ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.

 ಸರ್ಕಾರಿ ವೈದ್ಯರಿಗೆ ಸರಿಯಾಗಿ ಸವಲತ್ತುಗಳು ಸಿಗುತ್ತಿಲ್ಲ ಎಂಬ ನೆಪವೊಡ್ಡಿ ಸಾಮೂಹಿಕ ರಾಜೀನಾಮೆ ತಂತ್ರದ ಮೂಲಕ ಬ್ಲಾಕ್‌ಮೇಲ್ ಮಾಡಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ