ಸಿಎಂ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನ

ಶನಿವಾರ, 20 ಫೆಬ್ರವರಿ 2016 (17:23 IST)
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡಲು ತಮ್ಮ ಸ್ವಂತ ಗ್ರಾಮವಾದ ಸಿದ್ದರಾಮಯ್ಯನ ಹುಂಡಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದಿರುವುದು ಕಂಡು ಬಂದಿತು.
 
ಮತದಾನ ಮಾಡಿದ ನಂತರ ತಮ್ಮ ಸ್ನೇಹಿತ ಕೆಂಪೀರಯ್ಯ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಭೂರಿ ಭೋಜನ ಕಾದಿತ್ತು. ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಮೊಟ್ಟೆಯನ್ನು ಗಡದ್ದಾಗಿ ಸೇವಿಸಿದ ಸಿಎಂ, ಕೆಲ ಹೊತ್ತು ಮನೆಯ ಆವರಣದಲ್ಲಿ ಗ್ರಾಮಸ್ಥರೊಂದಿಗೆ ಕುಶಲೋಪರಿ ವಿಚಾರಿಸಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮಕ್ಕೆ ಆಗಮಿಸಿದ ಸುದ್ದಿ ತಿಳಿದ ಗ್ರಾಮಸ್ಥರು, ನಾ ಮುಂದು ತಾ ಮುಂದು ಎನ್ನುವಂತೆ ಅವರಿದ್ದಲ್ಲಿಗೆ ಧಾವಿಸಿ ಸೆಲ್ಫಿ ತೆಗೆಸಿಕೊಂಡರು ಸಂಪೂರ್ಣ ರಿಲೀಫ್ ಆಗಿರುವಂತೆ ಕಂಡು ಬಂದ ಸಿಎಂ ಕೆಲ ಕಾಲ ಗ್ರಾಮಸ್ಥರೊಂದಿಗೆ ಹರಟೆ ಹೊಡೆದರು.
 
ವೃದ್ಧನೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಖರ್ಚಿಗೆ ಹಣ ನೀಡುವಂತೆ ಕೋರಿದಾಗ, ಸಿಎಂ ತಮ್ಮ ಪರ್ಸ್‌ನಿಂದ 1 ಸಾವಿರ ರೂಪಾಯಿ ನೋಟು ತೆಗೆದು ನೀಡಿದರು. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎನ್ನುವ ಆರೋಪ ಕೂಡಾ ಕೇಳಿ ಬಂದಿತ್ತು.
 
ಸಿಎಂ ಸಿದ್ದರಾಮಯ್ಯರಿಂದ 1 ಸಾವಿರ ರೂಪಾಯಿ ನೋಟು ಪಡೆದ ವೃದ್ಧ ಸಂತೋಷ ವ್ಯಕ್ತಪಡಿಸಿ, ಇತರ ಗ್ರಾಮಸ್ಥರ ಮುಂದೆ ಸಿಎಂ ಹಣ ನೀಡಿರುವ ಬಗ್ಗೆ ಹೇಳಿಕೊಳ್ಳುತ್ತಿರುವುದು ಕಂಡುಬಂದಿತು.

ವೆಬ್ದುನಿಯಾವನ್ನು ಓದಿ